ಪಂಜಾಬ್ ಚುನಾವಣೆ: ಹೊಸ ರಾಜಕೀಯ ಪಕ್ಷ ಘೋಷಿಸಿದ ರೈತ ನಾಯಕ ಗುರ್ನಾಮ್ ಸಿಂಗ್

IMAGE: PTI/ANI
ಚಂಡಿಗಡ,ಡಿ.18: ತನ್ನ ಹೊಸ ರಾಜಕೀಯ ಪಕ್ಷ ಸಂಯುಕ್ತ ಸಂಘರ್ಷ ಪಾರ್ಟಿಯ ಸ್ಥಾಪನೆಯನ್ನು ಶನಿವಾರ ಇಲ್ಲಿ ಪ್ರಕಟಿಸಿದ ರೈತ ನಾಯಕ ಗುರ್ನಾಮ್ ಸಿಂಗ್ ಚಾದುನಿ ಅವರು,ನೂತನ ಪಕ್ಷವು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಹೋರಾಡಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಹೆಚ್ಚಿನ ರಾಜಕೀಯ ಪಕ್ಷಗಳು ಹಣಬಲವುಳ್ಳ ವ್ಯಕ್ತಿಗಳ ವಶದಲ್ಲಿವೆ. ದೇಶದಲ್ಲಿ ಬಂಡವಾಳಶಾಹಿಯು ನಿರಂತರವಾಗಿ ಹೆಚ್ಚುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವೆ ಭಾರೀ ಅಂತರವಿದೆ. ಹಣವುಳ್ಳ ಜನರು ಬಡವರಿಗಾಗಿ ನೀತಿಗಳನ್ನು ರೂಪಿಸುತ್ತಿದ್ದಾರೆ. ನಮ್ಮ ಪಕ್ಷವು ಜಾತಿ ಮತ್ತು ಧರ್ಮಗಳನ್ನು ಮೀರಲಿದೆ. ಅದು ಜಾತ್ಯತೀತವಾಗಿರಲಿದೆ. ಅದು ಎಲ್ಲ ಧರ್ಮಗಳು,ಎಲ್ಲ ಜಾತಿಗಳು,ಗ್ರಾಮೀಣ ಮತ್ತು ನಗರ ಕಾರ್ಮಿಕರು ಹಾಗೂ ರೈತರಿಗಾಗಿ ಶ್ರಮಿಸಲಿದೆ ’ ಎಂದು ಹೇಳಿದರು.
ಸಂಯುಕ್ತ ಸಂಘರ್ಷ ಪಾರ್ಟಿಯು ಪಂಜಾಬ್ ವಿಧಾನಸಭೆಯ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದರು. ಸಂಯುಕ್ತ ಸಂಘರ್ಷ ಪಾರ್ಟಿಯು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೀರ್ಘಾವಧಿಯ ರೈತರ ಪ್ರತಿಭಟನೆಯಿಂದ ಹೊರಹೊಮ್ಮಿರುವ ಮೊದಲ ರಾಜಕೀಯ ಪಕ್ಷವಾಗಿದೆ. ಚಾಧುನಿ ಮೋದಿ ಸರಕಾರದೊಂದಿಗೆ ಮಾತುಕತೆ ನಡೆಸಲು ಅಧಿಕಾರ ಹೊಂದಿದ್ದ ಸಂಯುಕ್ತ ಕಿಸಾನ ಮೋರ್ಚಾದ ಐವರು ಸದಸ್ಯರ ಸಮಿತಿಯ ಭಾಗವಾಗಿದ್ದರು.





