ಭೀಮಾ ಕೋರೆಗಾಂವ್ ಪ್ರಕರಣ: ವರವರ ರಾವ್ ಆರೋಗ್ಯ ಸ್ಥಿರವಾಗಿದೆ, ಅವರು ಶರಣಾಗಬೇಕು ಎಂದ ಎನ್‍ಐಎ

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿರುವ ಕವಿ ವರವರ ರಾವ್ ಅವರ ಸ್ಥಿತಿ ವೈದ್ಯಕೀಯವಾಗಿ ಸ್ಥಿರವಾಗಿದೆ ಹಾಗೂ ಅವರು ಜೈಲು ಅಧಿಕಾರಿಗಳ ಮುಂದೆ ಶರಣಾಗತರಾಗಬೇಕು ಎಂದು ರಾಷ್ಟ್ರೀಯ ತನಿಖಾ ಏಜನ್ಸಿಯು ಶುಕ್ರವಾರ ಬಾಂಬೆ ಹೈಕೋರ್ಟ್‍ಗೆ ತಿಳಿಸಿದೆ.
ತಮ್ಮ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಕೋರಿ ವರವರ ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಎನ್‍ಐಎ ಮೇಲಿನಂತೆ ಹೇಳಿದೆ. ಈ ಹಿಂದಿನ ವಿಚಾರಣೆ ವೇಳೆ ರಾವ್ ಅವರ ಜಾಮೀನು ಅವಧಿಯನ್ನು ಹೈಕೋರ್ಟ್ ಡಿಸೆಂಬರ್ 20ರವರೆಗೆ ವಿಸ್ತರಿಸಿತ್ತು.
ರಾವ್ ಅವರ ವೈದ್ಯಕೀಯ ತಪಾಸಣೆ ನಡೆಸುವಂತೆ ಬಾಂಬೆ ಹೈಕೋರ್ಟ್ ಮುಂಬೈಯ ನಾನಾವತಿ ಆಸ್ಪತ್ರೆಗೆ ಡಿಸೆಂಬರ್ 3ರಂದು ಸೂಚಿಸಿತ್ತು. 82 ವರ್ಷದ ರಾವ್ ಅವರ ಕೂಲಂಕಷ ವೈದ್ಯಕೀಯ ತಪಾಸಣೆಗಾಗಿ ನ್ಯಾಯಾಲಯ ಆಸ್ಪತ್ರೆಗೆ ಎರಡು ವಾರಗಳ ಕಾಲಾವಕಾಶ ಒದಗಿಸಿತ್ತು.
ಅವರ ಆರೋಗ್ಯ ಸ್ಥಿತಿಯ ಸಾರಾಂಶವನ್ನು ಆಸ್ಪತ್ರೆಯು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದೆ. "ಅವರ ಆರೋಗ್ಯ ಸ್ಥಿರವಾಗಿದೆ ಆದರೆ ಅವರ ರಕ್ತದೊತ್ತಡವು ಸ್ವಲ್ಪ ಅಧಿಕವಾಗಿದೆ ಎಂದು ಹೃದ್ರೋಗತಜ್ಞರು ಕಂಡುಕೊಂಡಿದ್ದಾರೆ. ಈ ಕಾರಣದಿಂದಾಗಿ ಅವರಿಗೆ ನೀಡಲಾಗುವ ಸಿಲಾಸರ್ ಎಂಬ ಮಾತ್ರೆಯ ಡೋಸೇಜ್ ಅನ್ನು 5 ಎಂಜಿ ಇಂದ 10 ಎಂಜಿ ಗೆ ಏರಿಸಲಾಗಿದೆ" ಎಂದು ಆಸ್ಪತ್ರೆ ತನ್ನ ವರದಿಯಲ್ಲಿ ತಿಳಿಸಿತ್ತು.
ಉಳಿದಂತೆ ಅವರು ನಿಯಮಿತವಾಗಿ ತೆಗೆದುಕೊಳ್ಳುವ ಔಷಧಿಗಳನ್ನೇ ಮುಂದುವರಿಸುವಂತೆ ತಿಳಿಸಲಾಗಿದೆ ಎಂದು ವರದಿ ಹೇಳಿದೆ.
ಈ ವರದಿಯ ಆಧಾರದಲ್ಲಿ ರಾವ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಸಂದೇಶ್ ಪಾಟೀಲ್ ಆಗ್ರಹಿಸಿದರೆ, ಅವರ ಆರೋಗ್ಯ ಸ್ಥಿತಿಯ ಸಾರಾಂಶ ನೀಡಿದರೆ ಸಾಲದು ಸಂಪೂರ್ಣ ವರದಿ ಒದಗಿಸಬೇಕು ಎಂದು ರಾವ್ ಪರ ವಕೀಲ ಆನಂದ್ ಗ್ರೋವರ್ ಕೋರಿದರು. ಈ ಹಿನ್ನೆಲೆಯಲ್ಲಿ ರಾವ್ ಅವರ ಸಂಪೂರ್ಣ ವೈದ್ಯಕೀಯ ವರದಿಯನ್ನು ಒದಗಿಸುವಂತೆ ನ್ಯಾಯಾಲಯ ಆಸ್ಪತ್ರೆಗೆ ಹೇಳಿದೆ.
ವಿಚಾರಣೆಯು ಸೋಮವಾರ ಮುಂದುವರಿಯಲಿದೆ.