ದೇಶದಲ್ಲಿ 62 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ ಲಸಿಕೆಗಳು ಪೋಲು: ಗರಿಷ್ಠ ಮ.ಪ್ರ, ಉ.ಪ್ರ, ರಾಜಸ್ಥಾನದಲ್ಲಿ

ಹೊಸದಿಲ್ಲಿ: ದೇಶದಲ್ಲಿ 62 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆಯ ಡೋಸ್‍ಗಳು ಪೋಲಾಗಿವೆ ಹಾಗೂ ಇವುಗಳಲ್ಲಿ ಅರ್ಧದಷ್ಟು ಡೋಸ್‍ಗಳು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪೋಲಾಗಿವೆ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ ಭಾರತಿ ಪ್ರವೀಣ್ ಕುಮಾರ್, ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಅತಿ ಹೆಚ್ಚು ಲಸಿಕೆ ಪೋಲು ಮಾಡಿದ ರಾಜ್ಯಗಳ ಪೈಕಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದು ಇಲ್ಲಿ 16.48 ಲಕ್ಷ ಡೋಸ್‍ಗಳು ಪೋಲಾಗಿದ್ದರೆ ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ (12.60 ಲಕ್ಷ) ಮತ್ತು ರಾಜಸ್ಥಾನ (6.86 ಲಕ್ಷ) ಇವೆ. ಈ ಮೂರೂ ರಾಜ್ಯಗಳು ಒಟ್ಟು 36 ಲಕ್ಷ ಡೋಸ್ ಲಸಿಕೆ ಪೋಲು ಮಾಡಿವೆ.
ಕಳೆದ 11 ತಿಂಗಳುಗಳಲ್ಲಿ ಒಂದು ಲಕ್ಷ ಡೋಸ್‍ಗಿಂತ ಹೆಚ್ಚು ಲಸಿಕೆ ಪೋಲು ಮಾಡಿದ ರಾಜ್ಯಗಳ ಪಟ್ಟಿಯನ್ನು ನೀಡಿದ ಸಚಿವರು, ಅಸ್ಸಾಂನಲ್ಲಿ 4.58 ಲಕ್ಷ ಡೋಸ್ ಲಸಿಕೆ ಪೋಲಾಗಿದ್ದರೆ, ಜಮ್ಮು ಕಾಶ್ಮೀರ (4.57), ಆಂಧ್ರ ಪ್ರದೇಶ (3.80 ಲಕ್ಷ). ಗುಜರಾತ್ (2.28 ಲಕ್ಷ), ತಮಿಳುನಾಡು (2.38 ಲಕ್ಷ), ತ್ರಿಪುರಾ (2.10 ಲಕ್ಷ), ಪಶ್ಚಿಮ ಬಂಗಾಳ (1.4 ಲಕ್ಷ) ಮತ್ತು ಕರ್ನಾಟಕದಲ್ಲಿ 1.27 ಲಕ್ಷ ಲಸಿಕೆ ಡೋಸ್‍ಗಳು ಪೋಲಾಗಿವೆ ಎಂದು ಸಚಿವರು ತಿಳಿಸಿದರು.
ರಾಜ್ಯಗಳು ಮತ್ತು ಕೇಂದ್ರಾಡಳಿತಗಳಿಗೆ ಉಚಿತ ಲಸಿಕೆ ನೀಡುವ ಸಲುವಾಗಿ ಕೇಂದ್ರ ಸರಕಾರ ಡಿಸೆಂಬರ್ 19ರ ತನಕ ರೂ 19,675.46 ಕೋಟಿ ಖರ್ಚು ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.