ಮುಸ್ಲಿಂ ಎಜ್ಯುಕೇಶನಲ್ ಇನ್‍ಸ್ಟಿಟ್ಯೂಷನ್ ಫೆಡರೇಶನ್ ವತಿಯಿಂದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ, ಶಿಕ್ಷಕರ ತರಬೇತಿ ಶಿಬಿರ

ಪುತ್ತೂರು : ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನುಭವರಹಿತ ಕಲಿಸುವಿಕೆಯಿಂದ ಶಿಕ್ಷಣಕ್ಕೆ ತೊಡಕು ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಅನುಭವ ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಇಂತಹ ತರಬೇತಿಗಳು ಶಿಕ್ಷಕರ ಅನುಭವಕ್ಕೆ ಪೂರಕವಾಗಲಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ಹೇಳಿದರು.
ಅವರು ಮುಸ್ಲಿಂ ಎಜ್ಯುಕೇಶನಲ್ ಇನ್‍ಸ್ಟಿಟ್ಯೂಷನ್ ಫೆಡರೇಶನ್ (ಮೀಫ್) ವತಿಯಿಂದ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಅಶ್ಮಿ ಕಂಫರ್ಟ್ಸ್ ನಲ್ಲಿ ನಡೆದ ಶೈಕ್ಷಣಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಲ್ಲಿ ಗುಣಮಟ್ಟ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳಬೇಕಾಗಿದೆ. ಶಿಕ್ಷಕರ ಕೌಶಲ್ಯಭರಿತ ಕಲಿಸುವಿಕೆ ಮತ್ತು ಮಾದರಿ ಕಲಿಸುವಿಕೆಯಿಂದ ಮಕ್ಕಳ ಮನಸ್ಸು ಗೆಲ್ಲಲು ಸಾಧ್ಯವಿದೆ. ಪಾಠದಲ್ಲಿ ಶಿಕ್ಷಕರಿಗೆ ಪಠ್ಯದ ಭಾಗ ಕಲಿಸಿ ಮುಗಿಯುತ್ತದೆ. ಆದರೆ ಮಕ್ಕಳಿಗೆ ಕಲಿಕೆಯಲ್ಲಿನ ಗ್ರಹಿಕೆ ಸಮರ್ಪಕವಾಗಿ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರಲ್ಲಿ ಸ್ಪಷ್ಟತೆಯ ಅಗತ್ಯವಿದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಶಿಕ್ಷಣ ನೀಡಿದಾಗ ಶಿಕ್ಷಕರು ಯಶಸ್ವಿಯಾಗುತ್ತಾರೆ ಎಂದರು.
ಮೊಬೈಲ್ ನೀಡುವ ಮೂಲಕ ಮಕ್ಕಳಲ್ಲಿ ಕೆಲವೊಂದು ಸಮಸ್ಯೆಗಳು ಕಂಡು ಬರುತ್ತಿದ್ದು, ಹಂತ ಹಂತವಾಗಿ ಮೊಬೈಲ್ ಬಳಕೆಯಿಂದ ಹೊರಬರುವಂತೆ ಮಕ್ಕಳಿಗೆ ಮತ್ತು ಹೆತ್ತವರಿಗೆ ಕೌನ್ಸಿಲ್ ನೀಡುವ ಅಗತ್ಯವಿದೆ ಎಂದರು.
'ಮೀಫ್'ನ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಮೂಸಬ್ಬ ಪಿ ಬ್ಯಾರಿ ಪ್ರಾಸ್ತಾವಿಕ ಮಾತನಾಡಿ, ಮಾಜಿ ಸಚಿವ ಬಿ.ಎ.ಮೊಯ್ದಿನ್ ಅವರಿಂದ ಸ್ಥಾಪಿತಗೊಂಡಿರುವ ಮೀಫ್ ಸಂಸ್ಥೆಯು ಕಳೆದ 20 ವರ್ಷಗಳಿಂದ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇತ್ತೀಚೆಗೆ ಕೊರೋನ ಕಾರಣದಿಂದಾಗಿ ಕಲಿಕಾ ಮಾದರಿಯು ಬದಲಾಗಿ ಶಿಕ್ಷಕರಲ್ಲಿ ಕಲಿಕಾ ವಿಧಾನ ಕುಸಿದಿದೆ. ಅದರ ಪುನಶ್ಚೇತನಕ್ಕಾಗಿ ಇಂತಹ ಶೈಕ್ಷಣಿಕ ಕಾರ್ಯಾಗಾರ, ತರಬೇತಿಗಳನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತಿದೆ. ಮುಂದಿನ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಹಮ್ಮಿಕೊಳ್ಳುವ ಬಗ್ಗೆ ತಾಲೂಕುವಾರು ಯೋಜನೆ ರೂಪಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ 'ಮೀಫ್' ಪಶ್ಚಿಮ ವಲಯ ಉಪಾಧ್ಯಕ್ಷ ಕೆ.ಎಂ. ಮುಸ್ತಫಾ ಮಾತನಾಡಿ ಶೈಕ್ಷಣಿಕ ಅರಿವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದು ಸಂಸ್ಥೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಸ್‍ಎಸ್‍ಎಲ್‍ಸಿಯಲ್ಲಿ ಫಲಿತಾಂಶ ಹೆಚ್ಚಳ ಮಾಡುವ ಬಗ್ಗೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಕಿಕೊಂಡ ಯೋಜನೆಗಳು ಮಾದರಿಯಾಗಿದ್ದು, ಫಲಿತಾಂಶ ಹೆಚ್ಚಳಕ್ಕೆ ಮೇಲ್ಪಂಕ್ತಿ ನೀಡಿರುವ ಪುತ್ತೂರಿನಲ್ಲಿಯೇ ಈ ಪುನಶ್ಚೇತನ ಕಾರ್ಯಾಗಾರವನ್ನು ಯೋಜಿಸಲಾಗಿದೆ ಎಂದರು.
ಪುತ್ತೂರು ಸಾಲ್ಮರ ಮೌಂಟೇನ್ ವ್ಯೂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಪಡೀಲ್, ಸಂಚಾಲಕ ಮಹಮ್ಮದ್ ಸಾಬ್, ಮುಖ್ಯಗುರು ಮೋಹನಾಂಗಿ, ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಆಶ್ಮೀ ಕಂಫರ್ಟ್ಸ್ ನ ಸಂತೋಷ್ ಶೆಟ್ಟಿ ಮತ್ತಿತರರು ಅತಿಥಿಗಳಾಗಿ ಉಪಸ್ಥಿತರಿದ್ದರು.
'ಮೀಫ್' ವಲಯ ಸಂಯೋಜಕ ಅಮೀನ್ ಅಹ್ಸನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಅಶ್ರಫ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿಯಾದ ಅಂತಾರಾಷ್ಟ್ರೀಯ ತರಬೇತುದಾರ ಪ್ರೊ. ರಾಜೇಂದ್ರ ಭಟ್ ಕಾರ್ಕಳ ಅವರು ತರಬೇತಿ ನೀಡಿದರು.
ಡಾ. ಅಶ್ರಫ್ ಕಮ್ಮಾಡಿ ಸಾರಥ್ಯದ 'ಆಸ್ಕೋ ಡೈಮಂಡ್ಸ್' ಝಾಂಬಿಯಾ ಸಂಸ್ಥೆಯು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿತ್ತು.








