ಯಕ್ಷಗಾನ ಕಲಾವಿದರಿಗೆ ಬಸ್‌ಪಾಸ್ ವಿತರಣೆ

ಉಡುಪಿ, ಡಿ.18: ಕೆನರಾ ಬಸ್ ಮಾಲಕರ ಸಹಕಾರದಿಂದ ಉಡುಪಿಯ ಯಕ್ಷಗಾನ ಕಲಾರಂಗ, ಕಳೆದ ಹಲವು ವರ್ಷಗಳಿಂದ ಕರಾವಳಿಯ ಯಕ್ಷಗಾನದ ವೃತ್ತಿ ಮೇಳ ಕಲಾದರಿಗೆ ಶೇ.50ರ ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಾ ಬಂದಿದ್ದು, ಈ ಬಾರಿಯೂ 2022ರ ಆಗಸ್ಟ್ 31ರವರೆಗೆ ಅನ್ವಯವಾಗುವಂತೆ ಕೊಡಮಾಡಿದ ಬಸ್‌ಪಾಸ್‌ಗಳ ವಿತರಣಾ ಕಾರ್ಯಕ್ರಮ ಶನಿವಾರ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ನಡೆಯಿತು.
ಹಿರಿಯ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಅವರು ವಿವಿಧ ಮೇಳಗಳ ಪ್ರತಿನಿಧಿಗಳಿಗೆ ಬಸ್‌ಪಾಸ್‌ಗಳನ್ನು ವಿತರಿಸಿ ದರು. ಮಂದಾರ್ತಿ ಮೇಳದ ಮಹಾಬಲ ನಾಯ್ಕ, ಕೇಶವ ಆಚಾರ್ ಮತ್ತು ಮಾರಣಕಟ್ಟೆ ಮೇಳದ ಶ್ರೀನಿವಾಸ ಶೆಟ್ಟಿ ಪಾಸ್‌ಗಳನ್ನು ಸ್ವೀಕರಿಸಿದರು.
ಕರಾವಳಿ ಆಸುಪಾಸಿನ ಜಿಲ್ಲೆಗಳ 35 ವಿವಿಧ ಮೇಳಗಳ 400ಕ್ಕೂ ಅಧಿಕ ಕಲಾವಿದರು ಪಾಸ್ ಸೌಲಭ್ಯ ಪಡೆಯಲಿದ್ದಾರೆ. ಪದಾಧಿಕಾರಿಗಳಾದ ಎಸ್.ವಿ. ಭಟ್, ವಿ.ಜಿ.ಶೆಟ್ಟಿ, ನಾರಾಯಣ ಎಂ. ಹೆಗಡೆ, ಮನೋಹರ ಕೆ., ಅನಂತರಾಜ ಉಪಾಧ್ಯ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ, ವೃತ್ತಿ ಕಲಾವಿದರಿಗೆ ಈ ಸೌಲಭ್ಯ ಕಲ್ಪಿಸಿದ ಕೆನರಾ ಬಸ್ ಮಾಲಕರ ಸಂಘದ ಪದಾಧಿಕಾರಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.







