ವಿಶ್ವಸಂಸ್ಥೆ ಆರ್ಥಿಕ ನೆರವು ಕಡಿತ: ಜೋರ್ಡಾನ್ ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಪೆಲೆಸ್ತೀನ್ ನಿರಾಶ್ರಿತರು

ಸಾಂದರ್ಭಿಕ ಚಿತ್ರ:PTI
ಅಮ್ಮಾನ್, ಡಿ.18: ಜೋರ್ಡಾನ್ನಲ್ಲಿ ಪೌರತ್ವ ಪಡೆಯದೆ ನೆಲೆಸಿರುವ ಪೆಲೆಸ್ತೀನ್ ನಿರಾಶ್ರಿತರ ಪರವಾಗಿ ಕಾರ್ಯನಿರ್ವಹಿಸುವ ‘ ಪೆಲೆಸ್ತೀನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಪರಿಹಾರ ಮತ್ತು ನೆರವು ಘಟಕ’ (ಯುಎನ್ಆರ್ಡಬ್ಲ್ಯೂಎ) ಆರ್ಥಿಕ ಅನುದಾನ ಕಡಿತಗೊಳಿಸಿರುವುದರಿಂದ ಪೆಲೆಸ್ತೀನ್ ನಿರಾಶ್ರಿತರಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಮೂಲಗಳು ಹೇಳಿವೆ.
1967ರಲ್ಲಿ ಗಾಝಾ ಪಟ್ಟಿಯಿಂದ ಬಲಾತ್ಕಾರವಾಗಿ ಸ್ಥಳಾಂತರಿಸಲ್ಪಟ್ಟಿರುವ ಸುಮಾರು 1,75,000 ಪೆಲೆಸ್ತೀನ್ ನಿರಾಶ್ರಿತರು ಹಾಗೂ ಯುದ್ಧದಿಂದ ಜರ್ಝರಿತಗೊಂಡ ಸಿರಿಯಾದ ಪ್ರದೇಶದಿಂದ ಪಲಾಯನ ಮಾಡಿರುವ ಸುಮಾರು 18,000 ಮಂದಿ ಜೋರ್ಡಾನ್ನಲ್ಲಿ ನಿರಾಶ್ರಿತರಾಗಿ ನೆಲೆಸಿದ್ದು ಇವರಿಗೆ ದೇಶದ ಪೌರತ್ವ ಇಲ್ಲದಿರುವುದರಿಂದ ಸರಕಾರದ ಯಾವುದೇ ನೆರವು ಅಥವಾ ಅನುದಾನ ಲಭ್ಯವಾಗುತ್ತಿಲ್ಲ ಎಂದು ಯುಎನ್ಆರ್ಡಬ್ಲ್ಯೂಎ ವಕ್ತಾರ ವಿದಿಯನ್ ಒಥ್ಮಾನ್ ಹೇಳಿದ್ದಾರೆ.
ಈ ರೀತಿ ಅತಂತ್ರರಾಗಿರುವ ನಿರಾಶ್ರಿತರಿಗೆ ಯುಎನ್ಆರ್ಡಬ್ಲ್ಯೂಎ ಹಲವು ರೀತಿಯ ನೆರವು, ಸಹಾಯ ಒದಗಿಸುತ್ತಿದೆ. ಜೋರ್ಡಾನ್ನಲ್ಲಿ 161 ಶಾಲೆಗಳನ್ನು ಆರಂಭಿಸಿದ್ದು ಸುಮಾರು 1,20,000 ವಿದ್ಯಾರ್ಥಿಗಳಿದ್ದಾರೆ. 25 ಆರೋಗ್ಯ ಕೇಂದ್ರಗಳು ಯುಎನ್ಆರ್ಡಬ್ಲ್ಯೂಎ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಜೋರ್ಡಾನ್ನ ಪೌರತ್ವ ದಕ್ಕದ ಜನರಲ್ಲಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿರುವ ಸುಮಾರು 60,000 ಪೆಲೆಸ್ತೀನ್ ನಿರಾಶ್ರಿರಿಗೆ ಹಣದ ನೆರವು ಒದಗಿಸಲಾಗಿದೆ.
ಆದರೆ ಯುಎನ್ಆರ್ಡಬ್ಲ್ಯೂಎಗೆ ಈಗ ಆರ್ಥಿಕ ಸಮಸ್ಯೆ ಎದುರಾಗಿದೆ. ಜಾಗತಿಕ ದೇಣಿಗೆದಾರರಿಂದ ದೊರಕುತ್ತಿದ್ದ ನೆರವಿನ ಪ್ರಮಾಣ ಕಡಿತಗೊಂಡಿದೆ. ನವೆಂಬರ್ ಮಧ್ಯಭಾಗದಲ್ಲಿ ಬ್ರಸೆಲ್ಸ್ನಲ್ಲಿ ನಡೆದ ದೇಣಿಗೆದಾರರ ಸಮಾವೇಶದಲ್ಲಿ ಅಂದಾಜು ಮೊತ್ತದ 40% ಮೊತ್ತದಷ್ಟು ದೇಣಿಗೆ ಸಂಗ್ರಹವಾಗಿದೆ ಎಂದು ಯುಎನ್ಆರ್ಡಬ್ಲ್ಯೂಎ ವಕ್ತಾರ ತಮಾರಾ ಹೇಳಿದ್ದಾರೆ.
ವೆಸ್ಟ್ಬ್ಯಾಂಕ್(ಪಶ್ಚಿಮ ದಂಡೆ) 1950ರಲ್ಲಿ ಜೋರ್ಡಾನ್ನ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಟ್ಟಾಗ ಅಲ್ಲಿನ ನಿವಾಸಿಗಳು ಜೋರ್ಡಾನ್ ನ ಪೌರತ್ವಕ್ಕೆ ಅರ್ಹರಾಗಿದ್ದರು. ಆದರೆ ಈ ವ್ಯಾಪ್ತಿಯಿಂದ ಗಾಝಾ ಪಟ್ಟಿಯ ಪೆಲೆಸ್ತೀನೀಯರನ್ನು ಹೊರಗಿಡಲಾಗಿದೆ. ಯಾಕೆಂದರೆ ಇವರು ಈಜಿಪ್ಟ್ನ ಆಡಳಿತಾತ್ಮಕ ನಿಯಂತ್ರಣ ವ್ಯಾಪ್ತಿಗೆ ಸೇರಿದವರು. 1967ರ ಯುದ್ಧದಲ್ಲಿ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಿಂದ ಪಲಾಯನ ಮಾಡಿದವರು ಜೋರ್ಡಾನ್ನ ಪೌರತ್ವ ಪಡೆದಿದ್ದಾರೆ. ಆದರೆ ಗಾಝಾ ಪಟ್ಟಿಯಿಂದ ಪಲಾಯನ ಮಾಡಿ ಜೋರ್ಡಾನ್ ತಲುಪಿದವರಿಗೆ ಈ ಸೌಲಭ್ಯ ದಕ್ಕಿಲ್ಲ ಎಂದು ಜೋರ್ಡಾನ್ನ ಮಾಜಿ ಕಾರ್ಮಿಕ ಸಚಿವ ಜವಾದ್ ಅಲ್ಅನಾನಿಯನ್ನು ಉಲ್ಲೇಖಿಸಿ ಅಲ್ಜಝೀರಾ ವರದಿ ಮಾಡಿದೆ.
1988ರಲ್ಲಿ ಜೋರ್ಡಾನ್ ಪಶ್ಚಿಮ ದಂಡೆಯೊಂದಿಗಿನ ಆಡಳಿತಾತ್ಮಕ ಸಂಬಂಧ ಕಡಿದುಕೊಂಡ ಬಳಿಕವೂ, ಪಶ್ಚಿಮದಂಡೆ ಪ್ರದೇಶದಿಂದ ಪಲಾಯನ ಮಾಡಿದ್ದವರು ಹೊಂದಿದ್ದ ಪೂರ್ಣಪ್ರಮಾಣದ ಪೌರತ್ವ ಮುಂದುವರಿದಿದೆ. ಆದರೆ ಗಾಝಾ ಪಟ್ಟಿಯಿಂದ ಬಂದವರು ವಿದೇಶೀಯರಾಗಿಯೇ ಉಳಿದಿದ್ದಾರೆ ಎಂದು ಅಲ್ಅನಾನಿ ಹೇಳಿದ್ದಾರೆ.
ವಿದೇಶೀಯ ಎಂಬ ಹಣೆಪಟ್ಟಿ ಹೊಂದಿದವರು ಉದ್ಯೋಗದಿಂದ ಹಿಡಿದು ಮಕ್ಕಳ ರಾಷ್ಟ್ರೀಯತೆಯ ವಿಷಯದವರೆಗೂ ಪ್ರತೀ ಹಂತದಲ್ಲೂ ತೀವ್ರ ಸಮಸ್ಯೆ ಎದುರಿಸಬೇಕಾಗಿದೆ. ಇವರಿಗೆ ವೋಟು ಹಾಕುವ ಹಕ್ಕು ಇಲ್ಲ. ಲೈಸೆನ್ಸ್ ಅಥವಾ ಪಾಸ್ಪೋರ್ಟ್ ಶುಲ್ಕ ಇತರರಿಗಿಂತ 4 ಪಟ್ಟು ಹೆಚ್ಚು. ಮನೆ ಖರೀದಿಸಬೇಕಿದ್ದರೆ ಅಥವಾ ಬಾಡಿಗೆಗೆ ಪಡೆಯಬೇಕಿದ್ದರೂ ದೀರ್ಘಾವಧಿಯ ಭದ್ರತಾ ಅನುಮೋದನೆ ಪ್ರಕ್ರಿಯೆಗೆ ಒಳಪಡಬೇಕು.
ನಾವು ಜೋರ್ಡಾನ್ನವರು ಎಂದು ನಿಮಗೆ ಅನಿಸಿದರೆ ನಮಗೆ ಪೂರ್ಣಪ್ರಮಾಣದ ಪೌರತ್ವ ನೀಡಿ. ಅಥವಾ ನಾವು ಪೆಲೆಸ್ತೀನ್ಗಳು ಎನಿಸಿದರೆ ನಮ್ಮನ್ನು ಪೆಲೆಸ್ತೀನ್ಗೆ ವಾಪಸು ಕಳುಹಿಸಿ ಎಂದು ಅತಂತ್ರ ಸ್ಥಿತಿಯಲ್ಲಿರುವ ಪೆಲೆಸ್ತೀನ್ ನಿರಾಶ್ರಿತರು ಆಗ್ರಹಿಸುತ್ತಿದ್ದಾರೆ ಎಂದು ಅಲ್ಜಝೀರಾ ವರದಿ ಹೇಳಿದೆ.







