ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ: ವಿವಿಧ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ

ಬೆಂಗಳೂರು: ಬೆಳಗಾವಿಯಲ್ಲಿ ಸ್ವಾತಂತ್ರ‍್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿರುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿ ಎಂಇಎಸ್ ಸಂಘಟನೆಯವರು ದುಷ್ಕೃತ್ಯ ಮೆರೆದಿರುವುದಲ್ಲದೆ ಸರಕಾರಿ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದು ಸರಕಾರದ ಮೇಲೆ ನಡೆದಿರುವ ದಾಳಿಯಾಗಿದೆ. ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿವಿಧ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕರವೇ ಪ್ರವೀಣ್‌ಕುಮಾರ್ ಶೆಟ್ಟಿ ಬಣ, ಕರ್ನಾಟಕ ರಕ್ಷಣೆ ವೇದಿಕೆಯ ನಾರಾಯಣ ಗೌಡ, ಜಯಕರ್ನಾಟಕ ಸಂಘಟನೆಯ ಜಗದೀಶ್, ಡಾ.ರಾಜ್ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದು ಸೇರಿದಂತೆ ಅನೇಕ ಮುಖಂಡರು ಘಟನೆಯನ್ನು ಖಂಡಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಗಾಂಧಿ ನಗರದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ವಾಟಾಳ್ ನಾಗರಾಜ್ ಮಾತನಾಡಿ, ಮೊದಲಿನಿಂದಲೂ ನಾವು ಎಂಇಎಸ್ ಧೋರಣೆಯನ್ನು ಖಂಡಿಸುತ್ತಲೇ ಬಂದಿದ್ದೇವೆ. ಅವರ ಉದ್ಧಟತನದ ವರ್ತನೆ ವಿಪರೀತವಾಗಿದೆ. ಸರಕಾರಗಳು ಕಾಲಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ಸಂಗೊಳ್ಳಿ ರಾಯಣ್ಣ ಅವರಿಗೆ ಅವಮಾನ ಮಾಡಿ ರಾಜ್ಯಕ್ಕೆ ಕೆಟ್ಟ ಹೆಸರು ತಂದಿರುವ ಎಂಇಎಸ್ ಸಂಘಟನೆಯನ್ನು ಸಂಪೂರ್ಣ ನಿಷೇಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಕರವೇ ಬಣದ ಪ್ರವೀಣ್‌ಕುಮಾರ್ ಶೆಟ್ಟಿ ಮಾತನಾಡಿ, ಎಂಇಎಸ್ ಸಂಘಟನೆ ಪ್ರತಿ ಬಾರಿ ಶಾಂತಿ ಕದಡುವ ಯತ್ನ ನಡೆಸುತ್ತಿದೆ. ಅಧಿವೇಶನ ಸಂದರ್ಭದಲ್ಲಿ, ರಾಜ್ಯೋತ್ಸವ ಸಂದರ್ಭದಲ್ಲಿ ಇಂಥ ದುಷ್ಕೃತ್ಯಗಳನ್ನು ನಡೆಸುತ್ತಿದೆ. ಇಂಥ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು. ಬೆಳಗಾವಿಯಲ್ಲಿ ನಡೆದಿರುವ ಘಟನೆಯನ್ನು ಖಂಡಿಸಿ ಬೆಳಗಾವಿ ಚಲೋ ನಡೆಸುತ್ತೇವೆ ಎಂದು ಹೇಳಿದರು.
ರಾಜ್ಯೋತ್ಸವ ಸಂದರ್ಭದಲ್ಲಿ ಪ್ರತ್ಯೇಕ ಧ್ವಜ ಹಾರಿಸಲು ಮುಂದಾಗುವುದು, ಶಾಂತಿ ಸೌಹಾರ್ದತೆಗೆ ಧಕ್ಕೆ ತರುವುದು, ಕಿಡಿಗೇಡಿ ಕೃತ್ಯಗಳನ್ನು ಮಾಡುವ ಮೂಲಕ ನಾಡಿಗೆ ಕಳಂಕ ತರುವ ಕೆಲಸವನ್ನು ಎಂಇಎಸ್ ನಿರಂತರವಾಗಿ ಮಾಡುತ್ತಾ ಬಂದಿದೆ. ಅದಕ್ಕೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ ಎಂದು ಸಾ.ರಾ.ಗೋವಿಂದು ಗುಡುಗಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಎಂಇಎಸ್‌ಗೆ ಬೆಳಗಾವಿಯಲ್ಲಿ ಅಸ್ತಿತ್ವ ಇಲ್ಲದಂತಾಗಿದೆ. ಅಸ್ತಿತ್ವಕ್ಕಾಗಿ ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿದೆ. ಇದನ್ನು ನಾಡಿನ ಜನ ಸಹಿಸುವುದಿಲ್ಲ. ಕನ್ನಡಪರ ಸಂಘಟನೆಗಳು ತಕ್ಕ ಉತ್ತರ ನೀಡಲಿವೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಬರಹಗಾರರು ಸೇರಿದಂತೆ ವಿವಿಧ ಗಣ್ಯರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮರಾಠಿಗರು, ಕನ್ನಡಿಗರು, ರಾಜ್ಯದಲ್ಲಿ ಸೌಹಾರ್ದಯುತ ಹಾಗೂ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದು, ಕೆಲ ಕಿಡಿಗೇಡಿಗಳು ತಮ್ಮ ಅಸ್ತಿತ್ವಕ್ಕಾಗಿ ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ. ಸರಕಾರ ಸೂಕ್ತ ಕ್ರಮ ಕೈಗೊಂಡು ಶಾಂತಿಯುತ ವಾತಾವರಣ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.
‘ಎಂಇಎಸ್‌ನ ಈ ಕಿಡಿಗೇಡಿ ಕೃತ್ಯಕ್ಕೆ ಸರಕಾರದ ಹೊಣೆಗೇಡಿತನವೇ ಕಾರಣವಾಗಿದೆ. ಭಾಷಾ ಸಾಮರಸ್ಯ, ಮರಾಠಿಗರು, ಕನ್ನಡಿಗರು ಸೌಹಾರ್ದಯುತವಾಗಿ ಬದುಕುತ್ತಿದ್ದ ಸಂದರ್ಭದಲ್ಲಿ ಎಂಇಎಸ್‌ನವರು ಇಂತಹ ನೀಚ ಕೃತ್ಯ ಎಸಗಿದ್ದಾರೆ.’
ಸಾ.ರಾ.ಗೋವಿಂದು, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ







