ಏಕಾಂಗಿಯಾಗಿ ಸಮುದ್ರ ಪ್ರಯಾಣ ಮಾಡಿದ 1 ವರ್ಷದ ಬಾಲಕ

ಸಾಂದರ್ಭಿಕ ಚಿತ್ರ:PTI
ರೋಮ್, ಡಿ.18: 1 ವರ್ಷದ ಬಾಲಕ ಏಕಾಂಗಿಯಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಪ್ರಯಾಣಿಸಿ ಲಂಪೇಡುಸ ಎಂಬ ದ್ವೀಪಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಈತನ ಹೆತ್ತವರೇ ಈ ಅಪಾಯಕಾರಿ ಸಾಹಸಕ್ಕೆ ಮಗನನ್ನು ಒಡ್ಡಿದ್ದರು ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ 2 ದಿನದಲ್ಲಿ ಈ ದ್ವೀಪಕ್ಕೆ ಬಂದಿಳಿದ ಸುಮಾರು 500ಕ್ಕೂ ಅಧಿಕ ವಲಸಿಗರಲ್ಲಿ ಈ ಬಾಲಕನೂ ಸೇರಿದ್ದಾನೆ. ದೋಣಿಯೊಂದರಲ್ಲಿ ಸಮುದ್ರ ದಾಟುತ್ತಿದ್ದ 70 ಮಂದಿ ವಲಸಿಗರ ಮಧ್ಯೆ ಈ ಬಾಲಕನಿದ್ದ ಎಂದು ದಿ ರಿಪಬ್ಲಿಕಾ ಪತ್ರಿಕೆ ವರದಿ ಮಾಡಿದೆ. ನಡೆಯಲು ಕಲಿಯುವ ಮೊದಲೇ ಈ ಬಾಲಕ ಸಮುದ್ರ ದಾಟಿದ್ದಾನೆ. ಆತನಿನ್ನೂ ಮಗುವಾಗಿರುವ ಕಾರಣ ಹೆಸರು ಮತ್ತಿತರ ವಿವರ ಬಹಿರಂಗ ಪಡಿಸಲಾಗದು ಎಂದು ಪತ್ರಿಕೆ ಹೇಳಿದೆ.
ತಮ್ಮ ಮಧ್ಯೆ ಇರುವ ಈ ಬಾಲಕ ಯಾರೆಂಬುದು ಇತರ ವಲಸಿಗರಿಗೆ ತಿಳಿದಿರಲಿಲ್ಲ. ಬಹುಷಃ ಬಾಲಕ ದೋಣಿ ಹತ್ತಿದ ಮೇಲೆ ಹೆತ್ತವರು ದೋಣಿ ಹತ್ತಲು ಮುಂದಾದಾಗ ಅವರನ್ನು ತಡೆದಿರಬೇಕು. ಹಾಗಾಗಿ ಬಾಲಕ ಒಂಟಿಯಾಗಿ ಪ್ರಯಾಣಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದ್ವೀಪಕ್ಕೆ ಬಂದು ತಲುಪಿದ ತಂಡದಲ್ಲಿ 14 ವರ್ಷದ ಮತ್ತೊಬ್ಬ ಬಾಲಕನಿದ್ದ. ಈತನ ತಾಯಿ ದೋಣಿ ಏರುವ ಸಂದರ್ಭ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಳು ಎಂದು ವರದಿಯಾಗಿದೆ.





