ವ್ಯೂಹಾತ್ಮಕ ಅಗ್ನಿ ಪ್ರೈಮ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

photo:PTI
ಬಾಲಾಸೋರ (ಒಡಿಶಾ),ಡಿ.18: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತವು ಶನಿವಾರ ಒಡಿಶಾದ ಕರಾವಳಿಯಾಚೆಯ ಬಾಲಾಸೋರ್ನಲ್ಲಿ ಪರಮಾಣು ಸಾಮರ್ಥ್ಯದ ವ್ಯೆಹಾತ್ಮಕ ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. ಕ್ಷಿಪಣಿಯು 1,000 ಕಿ.ಮೀ.ನಿಂದ 2,000 ಕಿ.ಮೀ.ವರೆಗಿನ ಗುರಿಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.
ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದ್ದು,ಇದು ಅಗ್ನಿ ವರ್ಗದ ಕ್ಷಿಪಣಿಗಳ ನೂತನ ಪೀಳಿಗೆಯ ಅತ್ಯಾಧುನಿಕ ಆವೃತ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪರೀಕ್ಷಾರ್ಥ ಪ್ರಯೋಗದ ವೇಳೆ ಬಹಳಷ್ಟು ಹೊಸ ವೈಶಿಷ್ಟಗಳನ್ನು ಕ್ಷಿಪಣಿಗೆ ಸೇರ್ಪಡೆಗೊಳಿಸಲಾಗಿದೆ. ಕ್ಷಿಪಣಿಯು ಅತ್ಯಂತ ನಿಖರತೆಯೊಂದಿಗೆ ತನ್ನೆಲ್ಲ ಗುರಿಗಳನ್ನು ಸಾಧಿಸಿದೆ ಎಂದರು. ಹಿಂದಿನ ಸಲ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಈ ವರ್ಷದ ಜು.28ರಂದು ನಡೆಸಲಾಗಿತ್ತು. ಕ್ಷಿಪಣಿಯ ಅಭಿವೃದ್ಧಿ ಕಾರ್ಯ ಸದ್ಯವೇ ಪೂರ್ಣಗೊಳ್ಳಲಿದ್ದು,ಶೀಘ್ರವೇ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
ಭಾರತವು ಹೊಸ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ವ್ಯೂಹಾತ್ಮಕ ಕ್ಷಿಪಣಿಗಳನ್ನು ಇನ್ನಷ್ಟು ಸಮರ್ಥಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನೂ ಇತ್ತೀಚಿಗೆ ಯಶಸ್ವಿಯಾಗಿ ನಡೆಸಲಾಗಿತ್ತು.