ಕಾಮಗಾರಿ ವಿಳಂಬ: ಅಧಿಕಾರಿಗೆ ಸಂಸದ ತೇಜಸ್ವಿ ಸೂರ್ಯ ತರಾಟೆ

ಬೆಂಗಳೂರು: ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈಜಿಪುರ ಫ್ಲೆöÊಓವರ್ ಕಾಮಗಾರಿ ಕೈಗೆತ್ತಿಕೊಂಡು ಮೂರು ವರ್ಷ ಕಳೆದರೂ, ಕೇವಲ ಶೇ.45ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲ ಉಂಟಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶನಿವಾರ ಈಜಿಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬಹುದಿನಗಳಿಂದ ವಿಳಂಬಗೊಂಡಿರುವ ಈಜಿಪುರ ಫ್ಲೈಓವರ್ ಕಾಮಗಾರಿಯಿಂದ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಪ್ರಯಾಣಿಕರು ಸಂಚರಿಸಲು ಸಾಕಷ್ಟು ಅನಾನುಕೂಲ ಉಂಟಾಗುತ್ತಿದೆ. ಇದಕ್ಕೆ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವಾಗಿದ್ದು, ನಿಗದಿತ ದಿನಾಂಕದೊಳಗೆ ಉಳಿದಿರುವ ಕಾಮಗಾರಿ ಮುಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಗುತ್ತಿಗೆದಾರರೇ ಸಾರ್ವಜನಿಕರ ತೊಂದರೆಗೆ ಹೊಣೆಗಾರರಾಗಿದ್ದಾರೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಕಾರಿಡಾರ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಲಾಗುತ್ತಿದೆ. ಆದರೆ ಸಣ್ಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಲು ಬಿಬಿಎಂಪಿ ಅಸಮರ್ಥವಾಗಿದೆ. ಹಾಗಾಗಿ ಈ ಕುರಿತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತರೊಂದಿಗೆ ಚರ್ಚಿಸಿದ್ದು, ಅಗತ್ಯವಿದ್ದರೆ ಗುತ್ತಿಗೆದಾರರನ್ನು ಬದಲಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.





