ಕೋಲ್ಕತಾ ಮಹಾನಗರ ಪಾಲಿಕೆ ಚುನಾವಣೆ: ಮತದಾನದ ವೇಳೆ ಬಾಂಬ್ ಎಸೆತ; ಕೆಲವರಿಗೆ ಗಾಯ

ಕೋಲ್ಕತಾ, ಡಿ. 19: ಕೋಲ್ಕತ್ತಾದ ಈಶಾನ್ಯ ಭಾಗದಲ್ಲಿ ರವಿವಾರ ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ) ಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭ ಬಾಂಬ್ ಸ್ಫೋಟಗೊಂಡು ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಕೆಎಂಸಿ ವಾರ್ಡ್ ಸಂಖ್ಯೆ 36ರ ಟಾಕಿ ಬಾಲಕರ ಶಾಲೆಯ ಮತ ಕೇಂದ್ರದ ಸಮೀಪ ಈ ಬಾಂಬ್ ಸ್ಫೋಟ ಸಂಭವಿಸಿದೆ.
‘‘ಮತದಾನ ಕೇಂದ್ರದಿಂದ ಸುಮಾರು 200 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಇದರಿಂದ ಮತದಾನ ಪ್ರಕ್ರಿಯೆಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಈ ಪ್ರದೇಶದಲ್ಲಿ ಪೊಲೀಸರ ತುಕುಡಿ ನಿಯೋಜಿಸಲಾಗಿದೆ. ಯಾವುದೇ ಆತಂಕಕ್ಕೊಳಗಾಗದೆ ಮತದಾನದಲ್ಲಿ ಭಾಗಿಯಾಗುವಂತೆ ಮತದಾರರಲ್ಲಿ ನಾವು ಮನವಿ ಮಾಡಿದ್ದೇವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ’’ ಎಂದು ಪೊಲೀಸ್ ಉಪ ಆಯುಕ್ತ (ಪೂರ್ವ ಉಪನಗರ ವಿಭಾಗ) ಪ್ರಿಯಾಬ್ರತ ರಾಯ್ ಅವರು ಹೇಳಿದ್ದಾರೆ.
ಸ್ಥಳೀಯ ಜನರು ಗಾಯಗೊಂಡ ಟಾಕಿ ಬಾಲಕರ ಶಾಲೆ ಸಮೀಪ ಬಾಂಬ್ ಸ್ಫೋಟಗೊಂಡ ಘಟನೆಗೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಅಪರಾಹ್ನ 2.30ಕ್ಕೆ ಬಂಧಿಸಲಾಗಿದೆ ಎಂದು ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ.
‘‘ನಾವು ಇತರ ದುಷ್ಕರ್ಮಿಗಳನ್ನು ಗುರುತಿಸಿದ್ದೇವೆ. ಆದರೆ, ತನಿಖೆಯ ಕಾರಣಕ್ಕಾಗಿ ಅವರ ಹೆಸರನ್ನು ಬಹಿರಂಗಗೊಳಿಸುವುದಿಲ್ಲ’’ ಎಂದು ಜಂಟಿ ಪೊಲೀಸ್ ಆಯುಕ್ತ (ಕೇಂದ್ರ ಕಚೇರಿ) ಸುಭಂಕರ್ ಸಿನ್ಹಾ ಸರ್ಕಾರ್ ಅವರು ಹೇಳಿದ್ದಾರೆ.