ಗುರ್ಗಾಂವ್ ನಲ್ಲಿ ನಮಾಝ್ ಗೆ ಅಡ್ಡಿ ಮಾಡುತ್ತಿರುವ ಗುಂಪಿನ ಕಾರ್ಯತಂತ್ರ ಇಲ್ಲಿದೆ...
Indianexpress.com ವರದಿ

ಗುರ್ಗಾಂವ್(ಹರ್ಯಾಣ),ಡಿ.19: ಗುರ್ಗಾಂವ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಸೀದಿಗಳಿಲ್ಲ. ಹೀಗಾಗಿ ಮುಸ್ಲಿಮರು ತಮ್ಮ ಶುಕ್ರವಾರದ ನಮಾಝ್ ಗಾಗಿ ಸಾರ್ವಜನಿಕ ಜಾಗಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. 2018ರಲ್ಲಿ ಹಿಂದು ಮತ್ತು ಮುಸ್ಲಿಮರ ನಡುವೆ ಘರ್ಷಣೆಗಳ ಬಳಿಕ ಆಡಳಿತವು ಮುಸ್ಲಿಮರು ತಮ್ಮ ಶುಕ್ರವಾರದ ನಮಾಝ್ ನಡೆಸಲು ಕೆಲವು ಸಾರ್ವಜನಿಕ ಸ್ಥಳಗಳನ್ನು ನಿಗದಿಗೊಳಿಸಿತ್ತು. ಆದಾಗ್ಯೂ ಈ ಸ್ಥಳಗಳಲ್ಲಿ ಅವರು ನಮಾಝ್ ಮಾಡುವುದನ್ನು ಹಿಂದುತ್ವವಾದಿಗಳು ವಿರೋಧಿಸುತ್ತಲೇ ಬಂದಿದ್ದಾರೆ.
ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಡಿ.10ರಂದು ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು, ನಮಾಝ್ ಗಾಗಿ ಕೆಲವು ಸ್ಥಳಗಳನ್ನು ಮೀಸಲಿರಿಸಿದ್ದ ಹಿಂದಿನ ಆದೇಶವನ್ನು ರದ್ದುಗೊಳಿಸಲಾಗಿದೆ, ಇನ್ನು ಮುಂದೆ ಮುಸ್ಲಿಮರು ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಇದು ನಮಾಝ್ ಗೆ ವ್ಯತ್ಯಯಪಡಿಸುತ್ತಿರುವ ಹಿಂದುತ್ವ ಗುಂಪಿಗೆ ಇನ್ನಷ್ಟು ಬಲವನ್ನು ನೀಡಿದೆ.
ಶುಕ್ರವಾರದ ನಮಾಝ್ ಅನ್ನು ತಡೆಯಲು ಕಾರ್ಯತಂತ್ರ ರೂಪಿಸಲು ಹಿಂದುತ್ವ ಗುಂಪು ವಾರವಿಡೀ ಸಭೆಗಳನ್ನು ನಡೆಸುತ್ತಿರುತ್ತದೆ. ಹೆಚ್ಚಿನ ಹಿಂದುತ್ವ ಕಾರ್ಯಕರ್ತರು 22 ಬಲಪಂಥೀಯ ಗುಂಪುಗಳ ಒಕ್ಕೂಟವಾಗಿರುವ ‘ಸಂಯುಕ್ತ ಹಿಂದು ಸಂಘರ್ಷ ಸಮಿತಿ (ಎಸ್ಎಚ್ಎಸ್ಎಸ್)ಯೊಂದಿಗೆ ಗುರುತಿಸಿಕೊಂಡಿದ್ದಾರೆ.
‘ನೀವು ಭಾರತದಲ್ಲಿ ಇರಬೇಕೆಂದರೆ ಭಾರತ ಮಾತಾ ಕಿ ಜೈ ಎಂದು ಹೇಳಲೇಬೇಕು’ ಎಂದು ತಿಳಿಸಿದ ಅಮಿತ್ (27) ಎಂಬಾತ ಪ್ರತಿಭಟನೆಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಮಾಜಿ ಬಾಕ್ಸರ್ ಆಗಿರುವ ಈತ ತಾನು ಬಜರಂಗ ದಳದ ಕಾರ್ಯಕರ್ತ ಹಾಗೂ ರಾಷ್ಟ್ರೀಯ ಹಿಂದು ಶಕ್ತಿ ಸಂಘಟನೆಯ ಯುವಮೋರ್ಚಾದ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಕಳೆದ 15 ವರ್ಷಗಳಿಂದಲೂ ತಾನು ಹಿಂದು ಬಲಪಂಥೀಯ ಗುಂಪುಗಳೊಂದಿಗೆ ಗುರುತಿಸಿಕೊಂಡಿದ್ದೇನೆ ಎಂದ ಆತ, ತನ್ನ ಹೆಸರಿನೊಂದಿಗೆ ‘ಹಿಂದು’ಉಪನಾಮವನ್ನು ಜೋಡಿಸಿಕೊಂಡಿದ್ದಾನೆ. ನಿರುದ್ಯೋಗಿಯಾಗಿರುವ ಆತ,‘ಹಿಂದುಗಳ ಹಿತಾಸಕ್ತಿಗಳಿಗಾಗಿ’ ತಾನು ಪೂರ್ಣಾವಧಿ ಶ್ರಮಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಈ ಹಿಂದೆ ನಮಾಝ್ ನಡೆಯುತ್ತಿದ್ದ ಸೆಕ್ಟರ್12ರ ಸಾರ್ವಜನಿಕ ಸ್ಥಳದಲ್ಲಿ ಇತ್ತೀಚಿಗೆ ಎಸ್ಎಚ್ಎಸ್ಎಸ್ ಗೋವರ್ಧನ ಪೂಜೆಯನ್ನು ಆಯೋಜಿಸಿದ್ದು, ಬಿಕೆಪಿ ನಾಯಕ ಕಪಿಲ್ ಶರ್ಮಾ ಉಪಸ್ಥಿತಿಯಲ್ಲಿ ಅಮಿತ್ ಗೆ ‘ಧರ್ಮ ಯೋಧ ’ಬಿರುದನ್ನು ಪ್ರದಾನಿಸಲಾಗಿದೆ. ನಮಾಝ್ ವಿರುದ್ಧದ ಪ್ರತಿಭಟನೆಗಳಲ್ಲಿ ಆತನನ್ನು ಹಲವಾರು ಸಲ ಪೊಲೀಸರು ಬಂಧಿಸಿದ್ದಾರೆ. ಗುರ್ಗಾಂವ್ ಮಾತ್ರವಲ್ಲ,ಚಂಡಿಗಡ ಮತ್ತು ಘಾಝಿಯಾಬಾದ್ಗಳಲ್ಲೂ ತನ್ನನ್ನು ಎಷ್ಟು ಸಲ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಅಥವಾ ಬಂಧಿಸಲಾಗಿತ್ತು ಎಂಬ ಲೆಕ್ಕವೇ ತಪ್ಪಿಹೋಗಿದೆ ಎಂದು ಆತ ಹೇಳಿಕೊಂಡಿದ್ದಾನೆ.
ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ನಿಲ್ಲುವವರೆಗೆ ಗುರ್ಗಾಂವ್ ಮತ್ತು ಇಡೀ ಭಾರತದಲ್ಲಿ ನಮ್ಮ ಪ್ರತಿಭಟನೆಗಳು ಮುಂದುವರಿಯಲಿವೆ. ಅವರಿಗೆ ಅದು ಬೇಕಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲಿ. ಇದು ಹಿಂದುಗಳ ದೇಶ ಎಂದು ಹೇಳಿದ ಅಮಿತ್, ಅವರೇಕೆ ಮಸೀದಿಗಳಲ್ಲಿ ಪ್ರಾರ್ಥನೆಯನ್ನು ನಡೆಸಬಾರದು ಎಂದು ಪ್ರಶ್ನಿಸಿದ.
ಹಲವಾರು ಪ್ರತಿಭಟನಾಕಾರರು ಅಮಿತ್ ಜೊತೆಯಲ್ಲಿದ್ದಾರೆ. ಕಳೆದ ಕೆಲವು ವಾರಗಳಿಂದಲೂ ಗುರ್ಗಾಂವ್ ನ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ನಮಾಝ್ ಗಳನ್ನು ಈ ಗುಂಪು ನಿಲ್ಲಿಸಿದೆ. ನಮಾಝ್ಗೆಂದು ಮುಸ್ಲಿಮರು ಸೇರುವ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸುವುದು, ಹೋಮಹವನಗಳನ್ನು ಮಾಡುವುದು, ಕ್ರಿಕೆಟ್ ಪಂದ್ಯವನ್ನು ಏರ್ಪಡಿಸುವುದು ಇವೆಲ್ಲ ಈ ಗುಂಪು ಅನುಸರಿಸುತ್ತಿರುವ ಕಾರ್ಯತಂತ್ರವಾಗಿದೆ.
‘ಬಡವರಿಗಾಗಿ’ ಮಾನವತಾ ಸಂಘಟನ್ ನಡೆಸುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿ ಪ್ರವೀಣ್ ಯಾದವ್ ಎಂಬಾತನೂ ಪ್ರತಿಭಟನಾಕಾರರ ನಾಯಕರಲ್ಲೊಬ್ಬನಾಗಿದ್ದಾನೆ. ‘ನಮ್ಮ ಮೂಲಗಳು ನಮಾಝ್ಗಾಗಿ ಜನರು ಸೇರುವ ಸಾಧ್ಯತೆಗಳಿರುವ ಜಾಗಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಾರೆ. ನಾವು ಅಲ್ಲಿಗೆ ತೆರಳಿ ಆಡಳಿತವು ಅನುಮತಿಯನ್ನು ಹಿಂದೆಗೆದುಕೊಂಡಿದೆ ಮತ್ತು ನೀವು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಅವರಿಗೆ ಹೇಳುತ್ತೇವೆ. ಇದು ನಮಾಝ್ ಅಲ್ಲ,ಇದು ಭೂಮಿಯನ್ನು ಅತಿಕ್ರಮಿಸಲು ಮುಸ್ಲಿಮರು ನಡೆಸುತ್ತಿರುವ ಹುನ್ನಾರವಾಗಿದೆ ’ ಎಂದು ಆತ ಹೇಳಿದ.
ವಾರವಿಡೀ ಸಭೆಗಳನ್ನು ನಡೆಸಿ ಕಾರ್ಯತಂತ್ರಗಳನ್ನು ರೂಪಿಸುವ ಪ್ರತಿಭಟನಾಕಾರರು ಗುರ್ಗಾಂವ್ನಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಮಾಝ್ ನಡೆಯುತ್ತಿದ್ದರೆ ತಕ್ಷಣ ಅಲ್ಲಿಗೆ ಧಾವಿಸಿ ಅದನ್ನು ನಿಲ್ಲಿಸುತ್ತಿದ್ದಾರೆ. ನಮಾಝ್ ಮುಂದುವರಿಸದಂತೆ ಆಸ್ತಿಕರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಮತ್ತು ಅವರನ್ನು ಮರಳಿ ಕಳುಹಿಸುತ್ತಿದ್ದಾರೆ. ಡಿ.10ರ ಖಟ್ಟರ್ ಹೇಳಿಕೆಯ ಬಳಿಕ ಈ ಪ್ರತಿಭಟನೆಗಳು ಹೆಚ್ಚಿನ ಕಾವು ಪಡೆದುಕೊಂಡಿವೆ.
ಆಡಳಿತವು ಗುರ್ಗಾಂವ್ ನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಹಿಂದುತ್ವವಾದಿ ಗುಂಪುಗಳಿಗೆ ಅವಕಾಶ ನೀಡುತ್ತಿದೆ. ಶುಕ್ರವಾರದ ನಮಾಝ್ ಅನ್ನು ಹೇಗೆ ಮತ್ತು ಎಲ್ಲಿ ನಡೆಸಬೇಕು ಎನ್ನುವುದನ್ನು ಅವರು ವ್ಯಾಖ್ಯಾನಿಸುತ್ತಿದ್ದಾರೆ ಎಂದು ಗುರ್ಗಾಂವ್ ಮುಸ್ಲಿಮ್ ಕೌನ್ಸಿಲ್ ನ ವಕ್ತಾರ ಅಲ್ತಾಫ್ ಅಹ್ಮದ್ ಹೇಳಿದರು.
ಕೃಪೆ: Indianexpress.com







