ಬೆಂಗಳೂರು: ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣ; ಏಳು ಮಂದಿ ಬಂಧನ

ಬೆಂಗಳೂರು, ಡಿ.19: ಸ್ಯಾಂಕಿ ಕೆರೆ ಬಳಿಯ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಏಳು ಜನರನ್ನು ಭಾನುವಾರ ಬಂಧಿಸಿದ್ದಾರೆ.
ಸದಾಶಿವ ನಗರದ ಸ್ಯಾಂಕಿ ಕೆರೆಗೆ ಹೊಂದಿಕೊಂಡಂತಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಗುರುವಾರ ಮಧ್ಯರಾತ್ರಿ ಆರೋಪಿಗಳು ಕಪ್ಪು ಮಸಿ ಬಳಿದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅವರು, ಮೊನ್ನೆ ಡಿಸೆಂಬರ್ 17ರಂದು ಸದಾಶಿವನಗರದ ಬಾಷ್ಯಂ ಸರ್ಕಲ್ ಹತ್ತಿರದ ಸ್ಯಾಂಕಿ ಕೆರೆಯ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಬಳಿಯಲಾಗಿತ್ತು. ಇದಾದ ಬಳಿಕ ಮರಾಠ ಅಸೋಸಿಯೇಷನ್‍ನವರು ನೀಡಿದ್ದ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸ್ಥಳದಲ್ಲಿ ಸಿಕ್ಕಿದ ಕುರುಹುಗಳು ಮತ್ತು ತನಿಖೆಯ ಬಳಿಕ ನಿನ್ನೆ ಸಾಯಂಕಾಲ 5 ಮಂದಿಯನ್ನು ಹಾಗೂ ಇಂದು ಬೆಳಗ್ಗೆ ಇಬ್ಬರನ್ನು ಬಂಧಿಸಿದ್ದೇವೆ. ಒಟ್ಟಾರೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ಬಂಧಿಸಿದ್ದೇವೆ. ಅವರ ಬಳಿಯಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಕೆಲವರನ್ನು ಬಂಧಿಸಬೇಕಾಗಿದೆ ಎಂದರು.





