ಕನ್ನಡಪರ ಹೋರಾಟಕ್ಕೆ ಶಿವರಾಜ್ ಕುಮಾರ್ ನಾಯಕತ್ವ ವಹಿಸಲಿ: ಇಂದ್ರಜಿತ್ ಲಂಕೇಶ್

ಮೈಸೂರು,ಡಿ.19: ಕನ್ನಡ ಸಿನೆಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು, ಬೆಳಗಾವಿಗೆ ಹೋಗಿ ಕನ್ನಡ ಪರ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪತ್ರಕರ್ತ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದರು.
ನಗರದಲ್ಲಿ ರವಿವಾರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ಸಿನಿಮಾ ರಂಗಕ್ಕೆ ನಾಯಕತ್ವದ ಅವಶ್ಯಕತೆ ಇದೆ. ಡಾ.ರಾಜ್ ಕುಮಾರ್ ನಂತರ ಅಂಬರೀಷ್ ಆ ನೇತೃತ್ವ ವಹಿಸಿದ್ದರು. ಆದರೆ ಈಗ ಯಾರು ಇಲ್ಲ, ಹಾಗಾಗಿ ನಟ ಡಾ.ಶಿವರಾಜ್ ಕುಮಾರ್ ನಾಯಕತ್ವ ವಹಿಸಿಕೊಳ್ಳಬೇಕು, ಅವರ ಮಾರ್ಗದರ್ಶನದಡಿ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ಸಿನೆಮಾ ನಟರನ್ನು ಕನ್ನಡ ಹೋರಾಟಕ್ಕೆ ಬನ್ನಿ ಅಂತ ಕರೆಯಬೇಕಾದ ದುಸ್ಥಿತಿ ಬಂದಿದೆ. ಅದಕ್ಕಾಗಿ ಇದರ ನಾಯಕತ್ವವನ್ನು ನಟ ಶಿವರಾಜ್ ಕುಮಾರ್ ವಹಿಸಿಕೊಳ್ಳಬೇಕು, ಅದಕ್ಕೆ ನಮ್ಮ ಬೆಂಬಲ ಇರುತ್ತದೆ. ನಾಟು ಟ್ವಿಟರ್ ಹೋರಾಟದ ವಿರೋಧಿ, ನಾನು ಸಹ ಬೆಳಗಾವಿಗೆ ಹೋಗುತ್ತೇನೆ. ಹಿಂದೆ ಗೋಕಾಕ್ ಚಳವಳಿಗೆ ಡಾ.ರಾಜ್‍ಕುಮಾರ್ ಅವರನ್ನು ಕರೆ ತಂದಿದ್ದು ನಮ್ಮ ತಂದೆ ಲಂಕೇಶ್, ಡಾ.ರಾಜ್ ಅನುಮತಿ ಇಲ್ಲದೆ ಗೋಕಾಕ್ ಹೋರಾಟಕ್ಕೆ ರಾಜ್ ಅಂತ ಲೇಖನ ಬರೆದಿದ್ದರು. ನಂತರ ಡಾ.ರಾಜ್ ಕುಮಾರ್ ಹೋರಾಟಕ್ಕೆ ಬಂದಿದ್ದರು. ನಾವು ಹೋರಾಟಕ್ಕೆ ಬನ್ನಿ ಎಂದುಕರೆಯಬೇಕಾದ ಪರಿಸ್ಥಿತಿ ಬಂದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಸಿನೆಮಾದವರು ಬೀದಿಗಿಳಿದು ಹೋರಾಟ ಮಾಡಬೇಕಿದೆ. ಎಲ್ಲರೂ ಹೋರಾಟ ಮಾಡೋಣ ಬನ್ನಿ, ಸಿನಿಮಾ ಡಬ್ಬಿಂಗ್ ವಿಚಾರವಾಗಿಯೂ ಹೋರಾಟ ಆಗಬೇಕಿದೆ. ಇಲ್ಲವಾದಲ್ಲಿ ಕನ್ನಡ ಕಲಾವಿದರೂ ಡಬ್ಬಿಂಗ್ ಆರ್ಟಿಸ್ಟ್ ಆಗಬೇಕಾಗುತ್ತದೆ. ಕನ್ನಡ ಭಾಷೆಯ ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ನನ್ನ ಹೋರಾಟ ಡ್ರಗ್ಸ್ ವಿರುದ್ದ, ಯಾರ ವೈಯಕ್ತಿಕ ವಿಚಾರವಾಗಿ ಅಲ್ಲ, ಆದ್ದರಿಂದ ಡ್ರಗ್ಸ್ ಪ್ರಕರಗಳು ಬಹಳಷ್ಟು ಹೊರ ಬಂದಿವೆ. ಈ ವಿಚಾರವಾಗಿ ಪೊಲೀಸ್ ಆಯುಕ್ತರು ಬೆನ್ನು ತಟ್ಟಿದರು ಎಂದು ಹೇಳಿದರು.







