ಮಧ್ಯಪ್ರದೇಶ: ಬೆಲೆ ಕುಸಿತದಿಂದ ಹತಾಶನಾಗಿ ಬೆಳ್ಳುಳ್ಳಿ ಬೆಳೆಯನ್ನು ಸುಟ್ಟುಹಾಕಿದ ರೈತ

photo:screengrab from twitter/@Anurag_Dwary
ಮಂದಸೌರ,ಡಿ.19: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತನ್ನ ಬೆಳ್ಳುಳ್ಳಿ ಬೆಳೆಗೆ ಯೋಗ್ಯ ಬೆಲೆಯನ್ನು ಪಡೆಯಲು ಸಾಧ್ಯವಾಗದೆ ಹತಾಶಗೊಂಡಿದ್ದ ರೈತನೋರ್ವ ಅದಕ್ಕೆ ಬೆಂಕಿ ಹಚ್ಚಿ ನಾಶಗೊಳಿಸಿದ್ದಾನೆ.
ಶನಿವಾರ ಈ ಘಟನೆ ನಡೆದಿದ್ದು,ಉಜ್ಜೈನ್ ನ ರೈತ ಶಂಕರ ಸಿಂಗ್ ತಂದಿದ್ದ ಬೆಳ್ಳುಳ್ಳಿ ಕಳಪೆ ಗುಣಮಟ್ಟದ್ದಾಗಿದ್ದರಿಂದ ಪ್ರತಿ ಕ್ವಿಂಟಲ್ ಗೆ ಸುಮಾರು 1,400 ರೂ.ಗೆ ಹರಾಜಾಗಿತ್ತು. ಅಲ್ಲದೆ ಶನಿವಾರ 8,000ಕ್ಕೂ ಅಧಿಕ ಚೀಲ ಬೆಳ್ಳುಳ್ಳಿ ಮಾರುಕಟ್ಟೆಗೆ ಬಂದಿದ್ದು,ಪ್ರತಿ ಕ್ವಿಂಟಲ್ಗೆ 1000 ರೂ.ಮತ್ತು 12,000ರೂ.ನಡುವಿನ ಬೆಲೆಗಳಲ್ಲಿ ಮಾರಾಟವಾಗಿವೆ. ಕಡಿಮೆ ಬೆಲೆಯಿಂದ ಕ್ರುದ್ಧನಾಗಿದ್ದ ಸಿಂಗ್ ಸುಮಾರು 50-60 ಕೆಜಿ ಬೆಳ್ಳುಳ್ಳಿಗೆ ಬೆಂಕಿ ಹಚ್ಚಿದ್ದ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದರು.
ತಾನು ಬೆಳ್ಳುಳ್ಳಿ ಕೃಷಿಗಾಗಿ 2.5 ಲ.ರೂ.ಗಳನ್ನು ವ್ಯಯಿಸಿದ್ದೆ ಮತ್ತು ಅದರ ಮಾರಾಟದಿಂದಾಗಿ ಕೇವಲ ಒಂದು ಲ.ರೂ.ದೊರೆಯುತ್ತಿದ್ದರಿಂದ ತಾನು 150 ಕೆಜಿ ಬೆಳ್ಳುಳ್ಳಿಗೆ ಬೆಂಕಿ ಹಚ್ಚಿದ್ದೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ.
ಉರಿಯುತ್ತಿದ್ದ ಬೆಳ್ಳುಳ್ಳಿ ರಾಶಿಯ ಸುತ್ತ ಜನರು ನಿಂತಿರುವುದು ಮತ್ತು ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಿದ್ದುದು ವೀಡಿಯೊದಲ್ಲಿ ದಾಖಲಾಗಿದೆ.
ಇದೊಂದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
A young #Farmers Shankar Sirfira set ablaze around 160 kg garlic produce on not getting adequate price from traders during open auction in the Mandsaur Mandi @ndtv @ndtvindia pic.twitter.com/90wdDA7OR8
— Anurag Dwary (@Anurag_Dwary) December 19, 2021







