ಎಂಇಎಸ್ ಕಾರ್ಯಕರ್ತರಿಂದ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಅವಮಾನ: ಕನ್ನಡಪರ ಸಂಘಟನೆಗಳಿಂದ ಡಿ.20ಕ್ಕೆ ಬೆಳಗಾವಿ ಚಲೋ

ಸುವರ್ಣ ವಿಧಾನ ಸೌಧ
ಬೆಳಗಾವಿ, ಡಿ. 19: ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ನಗರದಲ್ಲಿ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿದೆ.
ಎಂಇಎಸ್ ಕಾರ್ಯಕರ್ತರ ಕುಕೃತ್ಯ ಖಂಡಿಸಿ ಕನ್ನಡ ಸಂಘಟನೆಗಳಿಂದ ಡಿ.20ರಂದು ಬೆಳಗಾವಿ ಚಲೋಗೆ ಕರೆ ಕೊಟ್ಟಿದ್ದಾರೆ. ಸ್ಥಳೀಯ ಕನ್ನಡಪರ ಸಂಘಟನೆಗಳ ಮುಖಂಡರು ರಾಯಣ್ಣ ಪ್ರತಿಮೆಯನ್ನು ಸರಿಪಡಿಸಿ ಪುನರ್ ಪ್ರತಿಷ್ಠಾಪಿಸಿದ್ದು, ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಿದ್ದಾರೆ.
ಈ ಮಧ್ಯೆ ಕನ್ನಡ ಬಾವುಟಕ್ಕೆ ಎಂಇಎಸ್ ಕಾರ್ಯಕರ್ತರು ಬೆಂಕಿ ಹಚ್ಚಿ, ರಾಯಣ್ಣನ ಮೂರ್ತಿಗೆ ಅವಮಾನ ಮಾಡಿದ ಘಟನೆ ಖಂಡಿಸಿ ಪ್ರತಿಭಟನೆ ಕಿಚ್ಚು ಹೆಚ್ಚಾಗುತ್ತಿದೆ. ಕನ್ನಡಪರ ಕಾರ್ಯಕರ್ತರಲ್ಲಿ ಆಕ್ರೋಶ ಮಡುಗಟ್ಟಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲವರನ್ನು ವಶಕ್ಕೆ ಪಡೆಯುತ್ತಿದ್ದಾರೆ.
ಎಂಇಎಸ್ ಪುಂಡರ ಉದ್ಧಟತನ ಮತ್ತು ಸಮಾಜದ ಶಾಂತಿ ಕೆಡಿಸುವ ಕೆಲಸವನ್ನು ಖಂಡಿಸಿ ಕರವೇ ಕಾರ್ಯಕರ್ತರು ಜಿಲ್ಲೆಯಲ್ಲಿ ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ಅಡ್ಡಿಪಡಿಸುತ್ತಿದ್ದಾರೆಂಬ ಆಕ್ರೋಶ ವ್ಯಕ್ತವಾಗಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ, ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿದ್ದ ಶಿವರಾಮೇಗೌಡ ಬಣದ ಕರವೇ ಜಿಲ್ಲಾಧ್ಯಕ್ಷ ಸಹಿತ ಹಲವು ಮುಖಂಡರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಚಲೋ ಬೆಳಗಾವಿ: ಎಂಇಎಸ್ ಕಾರ್ಯಕರ್ತರ ಕುಕೃತ್ಯ ಖಂಡಿಸಿ, ಕರವೇ ಕಾರ್ಯಕರ್ತರು ಬೆಂಗಳೂರಿನಿಂದ ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಗೆ ಸಾಗಿ ನಾಳೆ(ಡಿ.20) ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ.
ರಾಯಣ್ಣನ ಪ್ರತಿಮೆಗೆ ಅಪಮಾನ ಮಾಡಿದ ಎಂಇಎಸ್ನ ಪುಂಡರನ್ನು ಕೂಡಲೇ ಬಂಧಿಸಬೇಕು. ರಾಜ್ಯದಲ್ಲಿ ಶಾಂತಿ ಕದಡುವ ಎಂಇಎಸ್ ಅನ್ನು ನಿಷೇಧಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.







