ಸಂವಿಧಾನದ ಮೂಲ ಆಶಯಗಳ ಮೇಲೆ ಆಕ್ರಮಣ ನಡೆಯುತ್ತಿದೆ: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಡಿ.19: 2014ರ ನಂತರ ಸಂವಿಧಾನದ ಮೂಲ ಆಶಯಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಬಹುಸಂಸ್ಕೃತಿ ಹಾಗೂ ಬಹುತ್ವದ ರಾಷ್ಟ್ರದಲ್ಲಿ ಸಂವಿಧಾನವು ಎಲ್ಲರಿಗೂ ಸಮಾನತೆ ನೀಡಿದೆ. ಹಾಗಾಗಿ ಸಂವಿಧಾನವನ್ನು ಕಾಪಾಡದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಾದಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ರವಿವಾರ ಪ್ರಜಾ ಪ್ರಕಾಶನವು ನಗರದಲ್ಲಿರುವ ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡ ಪರ್ಲ್ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ತುಳು-ಕೊಡವ ಭಾಷೆಗಳ ಅಳಿವು-ಉಳಿವು ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೇಲೆ ಆಕ್ರಮಣವಾಗುತ್ತಿದೆ. ಆದುದರಿಂದ ನಾವು ಅಂಬೇಡ್ಕರ್ ನೀಡಿದ ಸಂವಿಧಾನವನ್ನು ರಕ್ಷಿಸಬೇಕಾಗಿದೆ. ಸಂವಿಧಾನ ನಾಶವಾದರೆ ಪಟೇಲರು, ಜಮೀನುದಾರರು ಹಾಗೂ ಶಾನುಭೋಗರು ಪುನಃ ನಮ್ಮನ್ನು ಕೂಲಿ ಆಳುಗಳಂತೆ ಆಳ್ವಿಕೆ ಮಾಡುತ್ತಾರೆ. ಹಾಗಾಗಿ ನಾವು ಸಂವಿಧಾನವನ್ನು ರಕ್ಷಿಸಬೇಕೆ ಹೊರತು ಆರ್‍ಎಸ್‍ಎಸ್ ರಕ್ಷಿಸುವುದಲ್ಲ ಎಂದು ಮಾರ್ಮಿಕವಾಗಿ ನುಡಿದರು.
1956ರ ರಾಜ್ಯ ಪುನರ್ ರಚನೆಯಾಗುವ ಸಂದರ್ಭದಲ್ಲಿ ಅನುಚ್ಛೇದ 347, 350ಎ, 350ಬಿ ಪ್ರಕಾರ ದೊಡ್ಡ ರಾಜ್ಯಗಳೊಂದಿಗೆ ವಿಲೀನಗೊಳ್ಳುವ ಸಣ್ಣ ಪ್ರದೇಶಗಳ ಸ್ಥಳೀಯ ಭಾಷೆಗಳನ್ನು ಉಳಿಸಿ, ಬೆಳೆಸುವುದು ನೂತನ ರಾಜ್ಯಗಳ ಜವಾಬ್ದಾರಿ ಎಂಬುದನ್ನು ಸಂವಿಧಾನವು ಸಾರಿ ಹೇಳಿದೆ. ಹಾಗಾಗಿ ದೇಶದ 22 ಅಧಿಕೃತ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದಾಗಿದ್ದು, ರಾಜ್ಯದ ಸಣ್ಣ ಪ್ರದೇಶಗಳ ಸ್ಥಳೀಯ ಭಾಷೆಗಳಾದ ಕೊಡವ ಮತ್ತು ತುಳುವನ್ನು ಕಾಪಾಡಬೇಕು ಎಂದು ಅವರು ತಿಳಿಸಿದರು.
ಸರಕಾರವು ದೇಶದಲ್ಲಿ ಕೇವಲ 28 ಸಾವಿರ ಮಂದಿ ಮಾತನಾಡುವ ಸಂಸ್ಕೃತಕ್ಕೆ 640 ಕೋಟಿ ರೂ. ಕೊಟ್ಟರೆ, 6 ಕೋಟಿ ಕನ್ನಡ ಮಾತನಾಡುವವರಿಗೆ 3 ಕೋಟಿ ಮೀಸಲಿಡುತ್ತಿದೆ. ಆದರೆ ಸಂವಿಧಾನದಲ್ಲಿ ಎಲ್ಲಾ ಭಾಷೆಗಳ ರಕ್ಷಣೆಯ ಖಾತ್ರಿ ನೀಡಿದ್ದರೂ, ತುಳು ಹಾಗೂ ಕೊಡವ ಭಾಷೆಗೆ ಅನುಧಾನವನ್ನು ಮೀಸಲಿಡುವುದಿಲ್ಲ ಎಂದು ಅವರು ಹೇಳಿದರು.
ರಾಜ್ಯಸಭಾ ಸಂಸದ ಮತ್ತು ಸಾಹಿತಿ ಎಲ್.ಹನುಮಂತಯ್ಯ ಮಾತನಾಡಿ, ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೆ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ಮಾಡಿದರೆ ಅದನ್ನು ನಾವು ಸಹಿಸಲು ಸಿದ್ಧರಿಲ್ಲ. ಕನ್ನಡ ಬಾಷೆಯ ರೀತಿಯಲ್ಲಿ ಹಿಂದಿಯೂ ಒಂದು ಭಾಷೆಯಾಗಿದೆ. ಹಾಗಾಗಿ ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನ ಕಲ್ಪಿಸಲು ಒಂದು ರಾಷ್ಟ್ರೀಯ ಕಾನೂನು ತರುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಲೇಖಕಿ ಬಿ.ಟಿ.ಲಲಿತಾನಾಯಕ್, ಕೃತಿ ಸಂಪಾದಕ ಆರ್.ಜಯಕುಮಾರ್, ಕಾಂಗ್ರೆಸ್ ಮುಖಂಡ ಯು.ಬಿ.ವೆಂಕಟೇಶ್, ಎನ್.ವಿ.ನಾಚಪ್ಪ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಭಾರತವು ಬಹುತ್ವದ ದೇಶವಾಗಿದ್ದು, ಹಲವು ಭಾಷೆ, ಸಂಸ್ಕೃತಿಗಳ ಸಮ್ಮಿಲನವನ್ನು ಕಾಣುತ್ತೇವೆ. ದೇಶದಲ್ಲಿ ಸುಮಾರು 19,569 ಭಾಷೆಗಳಿದ್ದು, ಆ ಎಲ್ಲಾ ಭಾಷೆಗಳನ್ನು ಕಾಪಾಡುವ ಹೊಣೆ ನಮ್ಮದಾಗಿದೆ. 2003ರಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಪಟ್ಟಿಯಲ್ಲಿದ್ದ ಭಾಷೆಗಳ ಪೈಕಿ ತುಳು ಭಾಷೆಯೂ ಒಂದಾಗಿತ್ತು. ಆದರೆ, ತುಳು ಬಾಷೆಯು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳುವಲ್ಲಿ ವಿಫಲವಾಯಿತು. ಈಗ ತುಳು ಸೇರಿದಂತೆ ಸುಮಾರು 99 ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಲು ಮುಂದಾಗಿವೆ.
-ಪುರುಷೋತ್ತಮ ಬಿಳಿಮಲೆ, ಪ್ರಾಧ್ಯಾಪಕ ಹಾಗೂ ಚಿಂತಕ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ದೆಹಲಿ







