ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಫೈನಲ್‌ನಲ್ಲಿ ಎಡವಿದ ಶ್ರೀಕಾಂತ್‌ಗೆ ಬೆಳ್ಳಿ
ಸೆಮಿ ಫೈನಲ್‌ನಲ್ಲಿ ಸೋತ ಯುವ ಆಟಗಾರ ಸೇನ್‌ಗೆ ಕಂಚು

ಮ್ಯಾಡ್ರಿಡ್, ಡಿ.19: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸಿಂಗಾಪುರದ ಲೋಹ್ ಕೀನ್ ವಿರುದ್ಧ ಸೋಲನುಭವಿಸಿರುವ ಭಾರತದ ಆಟಗಾರ ಕಿಡಂಬಿ ಶ್ರೀಕಾಂತ್ ಐತಿಹಾಸಿಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್ ಅವರು 15-21 ಹಾಗೂ 20-22 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಶನಿವಾರ ಸಹ ಆಟಗಾರ ಲಕ್ಷ ಸೇನ್ ವಿರುದ್ಧ ರೋಚಕ ಜಯ ಸಾಧಿಸಿರುವ ಕಿಡಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಈ ಮೂಲಕ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದಿದ್ದರು.
ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ ಶನಿವಾರ ನಡೆದಿದ್ದ ಸೆಮಿ ಫೈನಲ್‌ನಲ್ಲಿ ತೀವ್ರಪೈಪೋಟಿ ನೀಡಿದ 20ರ ಹರೆಯದ ಸೇನ್‌ರನ್ನು 17-21, 21-14, 21-17 ಗೇಮ್‌ಗಳ ಅಂತರದಿಂದ ಸೋಲಿಸಿದ್ದರು. ಇದೇ ವೇಳೆ ಕೊನೆಯ ತನಕ ದಿಟ್ಟ ಹೋರಾಟ ನೀಡಿದ್ದ ಲಕ್ಷ ಸೇನ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. 1983ರಲ್ಲಿ ಪ್ರಕಾಶ್ ಪಡುಕೋಣೆ ಹಾಗೂ 2019ರಲ್ಲಿ ಸಾಯಿ ಪ್ರಣೀತ್ ವಿಶ್ವ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿ ಕಂಚು ಜಯಿಸಿದ್ದರು.
ಸಿಂಗಾಪುರದ ಲೋಹ್ ಮತ್ತೊಂದು ಸೆಮಿ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಅಂಟೊನೆನ್‌ರನ್ನು 23-21, 21-14 ನೇರ ಗೇಮ್‌ಗಳ ಅಂತರದಿಂದ ಸೋಲಿಸಿದ್ದರು.
ಅಕಾನೆ ಯಮಗುಚಿ ಮಹಿಳಾ ಸಿಂಗಲ್ಸ್ ಚಾಂಪಿಯನ್
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ರವಿವಾರ ನಡೆದ ಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ಯಮಗುಚಿ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ಝು ಯಿಂಗ್‌ರನ್ನು 39 ನಿಮಿಷಗಳಲ್ಲಿ 21-14, 21-11 ಗೇಮ್‌ಗಳ ಅಂತರದಿಂದ ಮಣಿಸಿದರು.
ವಿಶ್ವದ ನಂ.3ನೇ ಆಟಗಾರ್ತಿ ಯಮಗುಚಿ ಇತಿಹಾಸದಲ್ಲಿ ಎರಡನೇ ಬಾರಿ ವಿಶ್ವ ಚಾಂಪಿಯನ್‌ಶಿಪ್ ಜಯಿಸಿದ ಜಪಾನ್‌ನ 2ನೇ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು. ಶನಿವಾರ ಮೊದಲ ಸೆಮಿ ಫೈನಲ್‌ನಲ್ಲಿ ತೈ ಝು ಯಿಂಗ್ ಚೀನಾದ ಬಿಂಗ್ ಜಿಯಾವೊರನ್ನು 21-17, 13-21, 21-14 ಗೇಮ್‌ಗಳ ಅಂತರದಿಂದ ಸೋಲಿಸಿದ್ದರೆ, ಯಮಗುಚಿ ಮತ್ತೊಂದು ಸೆಮಿ ಫೈನಲ್‌ನಲ್ಲಿ ಚೀನಾದ ಝಾಂಗ್ ಮಾನ್‌ರನ್ನು 21-19, 21-19 ಅಂತರದಿಂದ ಸೋಲಿಸಿದ್ದರು.