ಆಧಾರ್ ನೊಂದಿಗೆ ಮತದಾರರ ಪಟ್ಟಿಯ ಜೋಡಣೆಗೆ ಅವಕಾಶ ಕಲ್ಪಿಸುವ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆ

ಸಾಂದರ್ಭಿಕ ಚಿತ್ರ:PTI
ಹೊಸದಿಲ್ಲಿ,ಡಿ.19: ನಕಲಿ ಮತದಾನವನ್ನು ತಡೆಯಲು ಮತದಾರರ ಪಟ್ಟಿಯನ್ನು ಆಧಾರ್ ನೊಂದಿಗೆ ಜೋಡಿಸಲು ಅವಕಾಶ ಕಲ್ಪಿಸುವ ಚುನಾವಣಾ ಸುಧಾರಣೆಗಳ ಕುರಿತ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.
ಮತದಾರರ ನೋಂದಣಿ ಅಧಿಕಾರಿಗಳು ಮತದಾರರಾಗಿ ನೋಂದಾಯಿಸಿಕೊಳ್ಳಲು ಬಯಸುವವರಿಂದ ಗುರುತನ್ನು ದೃಢೀಕರಿಸಿಕೊಳ್ಳಲು ಆಧಾರ ಸಂಖ್ಯೆಯನ್ನು ಕೋರಲು ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ,2021 ಅವಕಾಶವನ್ನು ನೀಡುತ್ತದೆ.
ಮತದಾರರ ಪಟ್ಟಿಯಲ್ಲಿನ ನಮೂದುಗಳನ್ನು ದೃಢಪಡಿಸಿಕೊಳ್ಳಲು ಮತ್ತು ಒಬ್ಬನೇ ವ್ಯಕ್ತಿಯ ಒಂದಕ್ಕಿಂತ ಹೆಚ್ಚಿನ ಮತಕ್ಷೇತ್ರಗಳಲ್ಲಿ ಅಥವಾ ಒಂದೇ ಮತಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ನೋಂದಾಯಿತ ಹೆಸರುಗಳನ್ನು ಗುರುತಿಸಲು ಈಗಾಗಲೇ ನೋಂದಾಯಿತ ವ್ಯಕ್ತಿಗಳಿಂದ ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಲೂ ಮಸೂದೆಯು ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ. ಆಧಾರ್ ಸಂಖ್ಯೆಯನ್ನು ಒದಗಿಸಲು ಸಾಧ್ಯವಾಗದ್ದಕ್ಕೆ ತೃಪ್ತಿಕರ ಕಾರಣಗಳಿದ್ದರೆ ಮತದಾರರ ಪಟ್ಟಿಯಲ್ಲಿ ನೋಂದಣಿಗಾಗಿ ಯಾವುದೇ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಮತ್ತು ಮತದಾರರ ಪಟ್ಟಿಯಿಂದ ಯಾವುದೇ ನೋಂದಣಿಯನ್ನು ಅಳಿಸುವಂತಿಲ್ಲ. ಇಂತಹ ವ್ಯಕ್ತಿಗಳಿಗೆ ಇತರ ಪರ್ಯಾಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಂಸತ್ತಿನಲ್ಲಿ ಮಂಡನೆಗೆ ಮುನ್ನ ಲೋಕಸಭಾ ಸದಸ್ಯರಿಗೆ ವಿತರಿಸಲಾಗಿರುವ ಮಸೂದೆಯಂತೆ ಜನತಾ ಪ್ರಾತಿನಿಧ್ಯ (ಆರ್ಪಿ) ಕಾಯ್ದೆ,1950 ಮತ್ತು 1951ರ ವಿವಿಧ ಕಲಮ್ಗಳನ್ನು ತಿದ್ದುಪಡಿಗೊಳಿಸಲಾಗುತ್ತದೆ.
ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆಗಾಗಿ ಆರ್ಪಿ ಕಾಯ್ದೆ 1950ರ ಕಲಂ 23ಕ್ಕೆ ತಿದ್ದುಪಡಿಯನ್ನು ತರಲಾಗುತ್ತದೆ. ಕಾಯ್ದೆಯ ಕಲಂ 14ಕ್ಕೆ ತಿದ್ದುಪಡಿಯು ಅರ್ಹ ವ್ಯಕ್ತಿಗಳು ಮತದಾರರಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ನಾಲ್ಕು ‘ಅರ್ಹತಾ’ ದಿನಾಂಕಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಹಾಲಿ ವ್ಯವಸ್ಥೆಯಂತೆ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿ ಜನವರಿ 1 ಮಾತ್ರ ನೋಂದಾವಣೆಗೆ ಅರ್ಹತಾ ದಿನಾಂಕವಾಗಿದ್ದು,ಮಂಡನೆಯಾಗಲಿರುವ ಮಸೂದೆಯಲ್ಲಿ ಕ್ಯಾಲೆಂಡರ್ ವರ್ಷದ ಜ.1,ಎ.1,ಜು.1 ಮತ್ತು ಅ.1 ಅರ್ಹತಾ ದಿನಾಂಕಗಳಾಗಿವೆ.
ಆರ್ಪಿ ಕಾಯ್ದೆ 1950ರ ಕಲಂ 20 ಮತ್ತು ಆರ್ಪಿ ಕಾಯ್ದೆ 1951ರ ಕಲಂ 60ಕ್ಕೆ ತಿದ್ದುಪಡಿಯು ಸಶಸ್ತ್ರ ಪಡೆಗಳ ಮತದಾರರಿಗಾಗಿ ಚುನಾವಣೆಗಳು ಲಿಂಗ ತಟಸ್ಥತೆಯನ್ನು ಅನುಸರಿಸಲು ಅವಕಾಶ ನೀಡುತ್ತವೆ. ಇದರಂತೆ ‘ಪತ್ನಿ’ ಶಬ್ದಕ್ಕೆ ಬದಲಾಗಿ ‘ಸಂಗಾತಿ’ ಶಬ್ದವು ಬಳಕೆಯಾಗಲಿದೆ.
ಈಗಿರುವಂತೆ ಸೇನಾ ಸಿಬ್ಬಂದಿಯ ಪತ್ನಿ ಮತದಾರರ ಪಟ್ಟಿಯಲ್ಲಿ ಸೇವಾ ಮತದಾರಳಾಗಿ ನೋಂದಾಯಿಸಿಕೊಳ್ಳಬಹುದು,ಆದರೆ ಮಹಿಳಾ ಸೇನಾಧಿಕಾರಿಯ ಪತಿಗೆ ಈ ಅವಕಾಶವಿಲ್ಲ.







