ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಕ್ಕೆ ಮಾಜಿ ನಿರ್ದೇಶಕರುಗಳ ಒತ್ತಾಯ

ಅಡ್ಡಂಡ ಸಿ.ಕಾರ್ಯಪ್ಪ
ಮೈಸೂರು,ಡಿ.19: ರಂಗಾಯಣ ವಿವಾದ ಮತ್ತೆ ಬುಗಿಲೆದ್ದಿದ್ದು, ರವಿವಾರ ನಡೆದ ಆನ್ಲೈನ್ ಚಿಂತನಾ ಕಾರ್ಯಕ್ರಮದಲ್ಲಿ ರಂಗಾಯಣದ ಮಾಜಿ ನಿರ್ದೇಶಕರುಗಳು ಅಡ್ಡಂಡ ಸಿ. ಕಾರ್ಯಪ್ಪ ಅವರ ವಿರುದ್ಧ ಕಿಡಿ ಕಾರಿದರು.
ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಸಮಾನ ಆಸಕ್ತ ಸಂಘಟನೆಗಳು ನಡೆಸಿದ ರಂಗಾಯಣ ಉಳಿಸಿ ಆನ್ ಲೈನ್ ಪ್ರತಿರೋಧ ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕರನ್ನು ವಜಾಗೊಳಿಸಲು ಮತ್ತೆ ಆಗ್ರಹಿಸಲಾಯಿತು. ಬಹುತ್ವ ಸಂಸ್ಕೃತಿಗೆ ಧಕ್ಕೆಯಾಗಬಾರದು, ಹಾಗಾಗಿ ನಮಗೆ ಯಾವುದೇ ಪಟ್ಟ ಕಟ್ಟಿದರೂ ಹೋರಾಟದಿಂದ ಹಿಂಜರಿಯುವುದಿಲ್ಲ ಎಂದು ಗುಡುಗಿದರು.
ಈ ವೇಳೆ ರಂಗಾಯಣ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಮಾತನಾಡಿ, ರಂಗಾಯಣದಲ್ಲಿ ರಾಜಕೀಯ ಅಜೆಂಡಾ ಶುರುವಾಗಿದೆ. ಧನಿ ಎತ್ತಬೇಕಾದ ಕಲಾವಿದರೂ ಮೌನ ವಹಿಸಿದ್ದಾರೆ. ಸಂಘ ಪರಿವಾರದ ಚಿಂತನೆ ಯುವ ಸಮೂಹದ ದಿಕ್ಕು ತಪ್ಪಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಂಗಾಯಣದಲ್ಲಿ ಪ್ರಸನ್ನ ಅವರು ಬಹುರೂಪಿ ಉತ್ಸವ ಜಾರಿಗೆ ತಂದರು, ನನ್ನ ಅವಧಿಯಲ್ಲಿ ಚಿಣ್ಣರ ಮೇಳ ಶುರುವಾಯಿತು. ಹೀಗೆ ಪ್ರತಿ ನಿರ್ದೇಶಕರೂ ಒಂದೊಂದು ಹೊಸ ಯೋಜನೆ ತಂದಿದ್ದಾರೆ. ಜನಮೆಚ್ಚುಗೆ ಪಡೆದ ಯೋಜನೆಗಳು ಉಳಿದುಕೊಂಡಿವೆ. ಕಾರ್ಯಪ್ಪ ಅವರೂ ಹೊಸ ಯೋಜನೆ ತರಲಿ. ಅವರ ಆರ್ಎಸ್ಎಸ್ ಸಂಸ್ಕೃತಿಯದ್ದೇ ನಾಟಕ ಮಾಡಿ ಪ್ರದರ್ಶಿಸಲಿ. ನಮ್ಮನ್ನು ಮಾವೋ ವಾದಿಗಳು ಎನ್ನುವವರು ನಮ್ಮ ಯೋಜನೆಗಳನ್ನೇಕೆ ಮುಂದುವರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ಮಾತನಾಡಿ, ಕಾರ್ಯಪ್ಪ ಅವರು ಮೂಲ ರಾಜಕೀಯ ಆಕಾಂಕ್ಷಿ. ಜನವಿರೋಧಿ ನೀತಿಗಳ ಮೂಲಕ ರಂಗಾಯಣ ನೀತಿಗೆ ವಿರೋಧವಾಗಿ ಮಾತನಾಡುವುದು, ರಾಜಕೀಯ ಬೆರೆಸುವುದು, ಕೋಮುವಾದ ಪಡೆಯಿಂದ ಬಂದಿದ್ದೇನೆ ಏನು ಬೇಕಾದರೂ ಮಾಡಿಕೊಳ್ಳಿ ಎನ್ನುವ ಅಪ್ರಬುದ್ಧ ಹೇಳಿಕೆಗಳನ್ನು ಬಳಸುತ್ತಿರುವುದು ರಂಗಾಯಣದ ಇತಿಹಾಸಲ್ಲಿ ಇದೇ ಮೊದಲು. ಇಂಥವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ವ್ಯಕ್ತಿಗೆ ಯಾವುದೇ ಸಿದ್ದಾಂತವಿದ್ದರೂ, ಧರ್ಮ ಅನುಸರಿಸಿದರೂ ರಂಗಾಯಣಕ್ಕೆ ಬಂದ ಮೇಲೆ ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಹಿಂದಿನ ನಿರ್ದೇಶಕರೆಲ್ಲರೂ ಕಲೆ ಸಂಸ್ಕೃತಿ ಬೆಳೆಸುವತ್ತ ಚಿತ್ತ ಹರಿಸಿದ್ದರು. ಆದರೆ, ಕಾರ್ಯಪ್ಪ ಅವರು ಹಿಂದೂ ಧರ್ಮದ ಪರ ವಾಲಿದ್ದಾರೆ ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಅಡ್ಡಂಡ ಸಿ.ಕಾರ್ಯಪ್ಪ ಅವರ ನೇಮಕಾತಿಯನ್ನು ನಾವು ವಿರೋಧಿಸಿರಲಿಲ್ಲ. ಏಕೆಂದರೆ ರಂಗಪ್ರಜ್ಞೆ ಹೊಂದಿದ್ದ ವ್ಯಕ್ತಿ ಎಂದು ಖುಷಿಯಾಗಿತ್ತು. ನಂತರದಲ್ಲಿ ನಡವಳಿಕೆಯನ್ನು ನೋಡಿದಾಗ ರಂಗಾಯಣವನ್ನು ಆರ್ಎಸ್ಎಸ್ ಪ್ರೇರಿತ ಆದೇಶಗಳ ವೇದಿಕೆಯಾಗಿ ರೂಪಿಸುತ್ತಿದ್ದಾರೆ ಎನ್ನಿಸುತ್ತಿದೆ. ವಿಶ್ವಪ್ರಜ್ಞೆಯಂತೆ ಎಲ್ಲರನ್ನೂ ಒಳಗೊಳ್ಳುವ ರಂಗಾಯಣದಲ್ಲಿ ಎಡ-ಬಲವನ್ನು ತರುತ್ತಾ, ಆರ್ಎಸ್ಎಸ್ ಬೈಟಕ್ ಕೇಂದ್ರವಾಗಿ ನಡೆದುಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ. ಕಾರ್ಯಪ್ಪ ಅವರ ಮನಸ್ಸು- ಮಾತು, ಅಸಾಂಸ್ಕೃತಿಕ ಮತ್ತು ರಂಗಾಯಣಕ್ಕೆ ಅಪಚಾರ ಮಾಡುವ ರೀತಿ ನಡೆಯುತ್ತಿದೆ. ಹಾಗಾಗಿ, ರಂಗಾಯಣ ಕೋಮುವಾದದೆಡೆಗೆ ಹೋಗದಂತೆ ಎಚ್ಚರವಹಿಸಬೇಕಿದೆ ಎಂದು ಕರೆ ನೀಡಿದರು.
ರಂಗಾಯಣ ಮಾಜಿ ನಿರ್ದೇಶಕರಾದ ಚಿದಂಬರರಾವ್ ಜಂಬೆ, ಭಾಗೀರಥಿ ಬಾಯಿ ಕದಂ, ಲಕ್ಷ್ಮೀ ಚಂದ್ರಶೇಖರ್, ನಾ.ದಿವಾಕರ್, ಸುಮಾ, ಕೆ.ಎಸ್.ವಿಮಲಾ, ಟಿ.ಸುಂದರ್ರಾವ್, ಗೋಪಾಲಕೃಷ್ಣ, ಎಸ್.ದೇವೇಂದ್ರಗೌಡ, ಜೆ.ಸಿ.ಶಶಿಧರ್, ಅಶ್ವಿನಿ, ಬಾಬು ಇಲಿಗರ್, ಜೆ.ಸಿ.ಶಶಿಧರ್, ಡಿ.ಆರ್.ಲಕ್ಷ್ಮೀ ನಾರಾಯಣ, ಕಾವ್ಯ ಅಚ್ಚುತ್, ಎನ್.ಎಸ್.ಶಾಂತಕುಮಾರ್, ಲಾವಣಿಕಾ, ಪುರುಷೋತ್ತಮ್, ಸುಷ್ಮಾ, ಮಲ್ಲಿಕಾರ್ಜುನ ಕಡಕೊಳ, ಸುಶೀಲ, ಲಕ್ಷ ?ಮಣ್ , ಪ್ರವೀಣ್ ರೆಡ್ಡಿ ರಾಯಚೂರು ಇನ್ನಿತರರು ಪಾಲ್ಗೊಂಡಿದ್ದರು.
ರಂಗಾಯಣ ಮಾಜಿ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ರಂಗಾಯಣದಲ್ಲಿ ಈ ರೀತಿಯ ನಡವಳಿಕೆಯಾಗಲಿ, ನಿರ್ದೇಶಕರಿಂದ ಈ ರೀತಿ ಮಾತುಗಳಾಗಲಿ ನಾವು ಕಂಡರಿಲಿಲ್ಲ. ಸಾಮಾಜಿಕವಾಗಿ ಮಾಡುವ ಕೆಲಸವನ್ನು ಬಿಟ್ಟು , ಉಳಿದೆಲ್ಲವನ್ನೂ ಮಾಡುತ್ತಿದ್ದಾರೆ. ನನ್ನ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಿದ್ದು, ನೋವುಂಟು ಮಾಡಿದೆ ಎಂದರು.







