ಮಂಗಳೂರು; ಮಲಬಾರ್ ಗೋಲ್ಡ್‌ನ ಸಿಎಸ್‌ಆರ್ ನಿಧಿಯಿಂದ ಬೋಟಲ್ ಕ್ರಶಿಂಗ್ ಮೆಶಿನ್ ಸಮರ್ಪಣೆ

ಮಂಗಳೂರು, ಡಿ.19: ಪ್ರಸಿದ್ಧ ಚಿನ್ನಾಭರಣ ಸಂಸ್ಥೆ ಮಲಬಾರ್ ಗೋಲ್ಡ್ ವತಿಯಿಂದ ಸಿಎಸ್‌ಆರ್ ನಿಧಿಯಡಿ 2 ಲಕ್ಷ ರೂ. ವೆಚ್ಚದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಳವಡಿಸಿದ ಬೋಟಲ್ ಕ್ರಶಿಂಗ್ ಮೆಶಿನ್ (ಬಾಟಲಿ ಪುಡಿ ಮಾಡುವ ಯಂತ್ರ)ನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ರವಿವಾರ ಪ್ರಯಾಣಿಕರ ಅನುಕೂಲಕ್ಕೆ ಸಮರ್ಪಿಸಿದರು.
ಬಳಿಕ ಮಾತನಾಡಿದ ಅವರು 2014ರಿಂದ ದೇಶದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸಂಘ ಸಂಸ್ಥೆಗಳು ತಮ್ಮ ಸಾಮಾಜಿಕ ಅಭಿವೃದ್ಧಿ ಕಾಳಜಿಯಡಿ ಸರ್ಕಾರಗಳ ಜೊತೆ ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದರು.
ಫಾಲಾಟ್ ರೈಲ್ವೆ ವಿಭಾಗೀಯ ಅಧಿಕಾರಿ ತ್ರಿಲೋಕ್ ಕೊಠಾರಿ ಮಾತನಾಡಿ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ 4 ಮತ್ತು 5ನೇ ಫ್ಲ್ಯಾಟ್‌ಫಾರ್ಮ್ ರಚನೆಗೆ ಮುನ್ನ ಪಿಟ್ ಸ್ಥಳಾಂತರ ಮಾಡಬೇಕಾಗಿದೆ. 2022ರ ಮಾರ್ಚ್ ಅಂತ್ಯದೊಳಗೆ ಫ್ಲ್ಯಾಟ್ ಫಾರ್ಮ್ ನಿರ್ಮಾಣ ಕಾಮಗಾರಿ ಮುಕ್ತಾಯಗೊಳಿಸುವ ಉದ್ದೇಶವಿದೆ ಎಂದರು.
ರೈಲಿನ ವೇಳಾಪಟ್ಟಿಗಳನ್ನು ಬದಲಿಸುವ ಮುನ್ನ ಫ್ಲ್ಯಾಟ್ ಫಾರ್ಮ್ ಲಭ್ಯವಿದೆಯೇ ಎಂಬುದನ್ನು ನೋಡಬೇಕಾಗುತ್ತದೆ. ವಿಜಯಪುರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಆಗಮಿಸಬೇಕಾದರೆ ರೈಲ್ವೆ ಬೋರ್ಡ್ ಅನುಮತಿ ಬೇಕು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸ್ಥಾಪಿಸಿದ ಬಾಟಲ್ ಕ್ರಶ್ ಯಂತ್ರದ ಉಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕು. ಮಂಗಳೂರಿನ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ತ್ರಿಲೋಕ್ ಕೊಠಾರಿ ಹೇಳಿದರು.
ಮಲಬಾರ್ ಗೋಲ್ಡ್‌ನ ಶರತ್ ಚಂದ್ರನ್, ಅಲ್ತಾಫ್ ಉಪಸ್ಥಿತರಿದ್ದರು.







