ಕನ್ನಡ ನಾಡು ರಕ್ಷಣೆಗೆ ಸರಕಾರ ಬದ್ಧ: ಸಂಸದ ನಳಿನ್ ಕುಮಾರ್

ಮಂಗಳೂರು, ಡಿ.19: ಬೆಳಗಾವಿಯಲ್ಲಿ ಎಂಇಎಸ್ ಗುಂಡಾಗಿರಿಯನ್ನು ಸಹಿಸಲು ಸಾಧ್ಯವಿಲ್ಲ. ರಾಷ್ಟ್ರ ನಾಯಕರ ಪ್ರತಿಮೆಗೆ ಗೌರವ ನೀಡುವ ಬದಲು ಹಾನಿ ಎಸಗಿ ಪುಂಡಾಡಿಕೆ ಮೆರೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಕನ್ನಡ ನಾಡು, ನುಡಿ, ನೆಲದ ಭಾಷೆಯ ರಕ್ಷಣೆಗೆ ಸರಕಾರ ಸದಾ ಬದ್ಧವಿದೆ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಹಿರಿಯ ಸದಸ್ಯರೊಬ್ಬರು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಕೂಡ ಖಂಡಿಸುತ್ತೇನೆ. ಅವರ ಬಾಯಲ್ಲಿ ಅಂತಹ ಮಾತು ಬರಬಾರದಿತ್ತು ಎಂದರು.
ಜ.10ರಂದು ಮಂಗಳೂರಿಗೆ ಗಡ್ಕರಿ: ದ.ಕ. ಜಿಲ್ಲೆಯ ವಿವಿಧ ಕಾಮಗಾರಿಗೆ ಚಾಲನೆ ನೀಡಲು ಕೇಂದ್ರ ಭೂ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜ.10ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಕುಲಶೇಖರ-ಕಾರ್ಕಳ 4 ಪಥ ಹೆದ್ದಾರಿ ಕಾಮಗಾರಿ ಹಾಗೂ ಬಿ.ಸಿ.ರೋಡ್-ಅಡ್ಡಹೊಳೆ 4 ಪಥ ಕಾಂಕ್ರಿಟ್ ಮರು ಕಾಮಗಾರಿಗೆ ಸಚಿವರು ಚಾಲನೆ ನೀಡಲಿದ್ದಾರೆ.
2023 ಡಿಸೆಂಬರ್ ನೊಳಗೆ ಈ ಕಾಮಗಾರಿ ಪೂರ್ಣಗೊಳಿಸುವ ಷರತ್ತು ವಿಧಿಸಲಾಗಿದೆ. ಈಗಾಗಲೇ ಕಲ್ಲಡ್ಕದಲ್ಲಿ ಹೆದ್ದಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಭರದ ಸಿದ್ಧತೆ ನಡೆಯುತ್ತಿದೆ ಎಂದು ನಳಿನ್ ತಿಳಿಸಿದರು.







