ಜ್ಞಾನವು ಆರ್ಥಿಕತೆ ಅಂಶವಾಗುವುದು ಭೀತಿ ಹುಟ್ಟಿಸುತ್ತಿದೆ: ಕೆ.ಸಿ. ರಘು

ಬೆಂಗಳೂರು, ಡಿ.19: ಜಗತ್ತು ವೇಗವಾಗಿ ಬದಲಾಗುತ್ತಿದೆ ಎಂಬ ಪರಿಕಲ್ಪನೆಯಲ್ಲಿ ಮನುಷ್ಯನು ಎಲ್ಲ ಸೌಲಭ್ಯಗಳನ್ನು ಕ್ಷಣಮಾತ್ರದಲ್ಲಿ ಪಡೆಯಬೇಕೆಂಬ ಕಲ್ಪನೆಯಲ್ಲಿದ್ದಾನೆ. ಆದರೆ, ಜ್ಞಾನವು ಆರ್ಥಿಕತೆಯ ಪ್ರಮುಖ ಅಂಶವಾಗುತ್ತಿರುವುದು ಭೀತಿ ಹುಟ್ಟಿಸುತ್ತಿದೆ ಎಂದು ಚಿಂತಕ ಹಾಗೂ ಅಂಕಣಕಾರ ಕೆ.ಸಿ. ರಘು ಅಭಿಪ್ರಾಯ ಪಟ್ಟರು.
ರವಿವಾರ ನವಕರ್ನಾಟಕ ಪಬ್ಲಿಕೇಷನ್ಸ್ ಸುಚಿತ್ರ ಫಿಲ್ಮಂ ಸೊಸೈಟಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ಯೋಗಿಂದ್ರ ಮರವಂತೆ ಬರೆದ ‘ಮುರಿದ ಸೈಕಲ್, ಹುಲಾ ಹೂಪ್ ಹುಡುಗಿ’ ಹಾಗೂ ಪತ್ರಕರ್ತ ಸತೀಶ್ ಚಪ್ಪರಿಕೆ ರಚಿಸಿದ ‘ಥೇಮ್ಸ್ ತಟದ ತವಕ ತಲ್ಲಣ’ ಕೃತಿಗಳನ್ನು ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್ಥಿಕತೆಯೇ ಜ್ಞಾನದ ವಿವಿಧ ಶಾಖೆಗಳನ್ನು ಆವರಿಸಿಕೊಂಡು ನಿಯಂತ್ರಿಸುತ್ತಿರುವುದು ಪ್ರಸ್ತುತ ಜಗತ್ತಿನ ಬಹುದೊಡ್ಡ ದುರಂತವಾಗಿದೆ. ಪ್ರತಿಯೊಂದು ವಲಯವು ಜಾಗತಿಕರಣಕ್ಕೆ ಒಳಗಾಗಿದ್ದು, ಆರ್ಥಿಕತೆಯ ಏಳು-ಬೀಳುಗಳಿಂದ ಮುಕ್ತವಾಗಿಲ್ಲ. ನಿರಂತರ ಯಾನದ ಸಂಕೇತವಾಗಿರುವ ಪುಸ್ತಕಗಳ ವಲಯವು ಸಹ ಆರ್ಥಿಕತೆಯ ವೈವಿಧ್ಯಮಯ ಒತ್ತಡದಿಂದ ತತ್ತರಿಸುತ್ತಿದೆ ಎಂದರು.
ಮೈಲ್ಯಾಂಗ್ ಬುಕ್ಸ್ ಸಹ ಸಂಸ್ಥಾಪಕ ವಸಂತ ಶೆಟ್ಟಿ ಮಾತನಾಡಿ, ಪುಸ್ತಕ ಓದುವ ಪ್ರಕ್ರಿಯೆ ಕೆಲಸದ ಒತ್ತಡದ ಮಧ್ಯೆ ನಿಧಾನವಾಗಿರಬಹುದು. ಆದರೆ, ತಲುಪಿಸುವ ಪ್ರಕ್ರಿಯೆ ಮಾತ್ರ ವೇಗ ಪಡೆದಿದೆ. ಪುಸ್ತಕ ಪ್ರಕಟಣಾ ಸಂಸ್ಕೃತಿಯು ಹಿಂದೆಂದಿಗಿಂತಲೂ ಈಗ ಅತೀ ವೇಗದಲ್ಲಿ ಮುನ್ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಅಂತರ್ಜಾಲದ ಎಲ್ಲ ಆಯಾಮಗಳು, ಸೌಲಭ್ಯಗಳು ಜನಸಾಮಾನ್ಯರಿಗೂ ತೀವ್ರವಾಗಿ ತಲುಪುತ್ತಿವೆ ಎಂದರು.
ಲೇಖಕ ಹಾಗೂ ಪತ್ರಕರ್ತ ಸತೀಶ್ ಚಪ್ಪರಿಕೆ, ಎಸ್. ಜನಾರ್ದನ, ಜೋಗಿ, ಟಿ.ಆರ್. ಅನಂತರಾಮು, ಪದ್ಮರಾಜ ದಂಡಾವತಿ, ಪದ್ಮಿನಿ ನಾಗರಾಜ್, ಆಶಾ ರಘು, ಅಂಜನಾ ಹೆಗಡೆ, ಅಂಕಿತ ಪ್ರಕಾಶನದ ಪ್ರಕಾಶ ಕಂಬತ್ತಳ್ಳಿ, ರಾಧಾಕೃಷ್ಣ ಶೆಟ್ಟಿ, ಅಭಿನವ ಪ್ರಕಾಶನದ ನ. ರವಿಕುಮಾರ, ಸಾವಣ್ಣ ಎಂಟರ್ ಪ್ರೈಸೆಸ್‍ನ ಜಮೀಲ್ ಸಾವಣ್ಣ, ಫರ್ಬಿಂಡೆನ್ ಕಮ್ಯುನಿಕೇಷನ್ಸ್ ಸಂಸ್ಥೆಯ ಸಿಇಓ ವಿನಯ್ ಕುಮಾರ್, ಗಿರೀಶ್ ಕೆರೋಡಿ, ಲೇಖಕ ವೀರಣ್ಣ ಮಡಿವಾಳರ ಸೇರಿದಂತೆ ಸಾಹಿತ್ಯ ವಲಯದ ಗಣ್ಯರು ಉಪಸ್ಥಿತರಿದ್ದರು.







