ಕೋವಿಡ್ ಸೋಂಕು: ಅಮೆರಿಕದ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ; ಹಾಸಿಗೆಗಳ ಕೊರತೆ

ಸಾಂದರ್ಭಿಕ ಚಿತ್ರ:PTI
ಡೆಟ್ರಾಯಿಟ್,ಡಿ.19: ಅಮೆರಿಕದ ವಿವಿಧೆಡೆ ಕೋವಿಡ್-19 ಡೆಲ್ಟಾ ಪ್ರಭೇದದ ಸೋಂಕಿನ ಹಾವಳಿಯಿಂದ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದರೆ, ಇನ್ನೊಂದೆಡೆ ಒಮೈಕ್ರಾನ್ ಪ್ರಭೇದದ ವೈರಸ್ ಕೂಡಾ ವ್ಯಾಪಕವಾಗಿ ಹರಡುತ್ತಿರುವುದು ಆರೋಗ್ಯ ಇಲಾಖೆಗಳಿಗೆ ತೀವ್ರ ಕಳವಳವನ್ನುಂಟು ಮಾಡಿದೆ.
ಒಹಿಯೊದಲ್ಲಿ ಪರಿಸ್ಥಿತಿ ಮಿತಿಮೀರಿದ್ದು, ಆಸ್ಪತ್ರೆಗಳೆಲ್ಲಾ ರೋಗಿಗಳಿಂದ ಭರ್ತಿಯಾಗಿದ್ದು, ಹೊಸ ರೋಗಿಗಳು ಚಿಕಿತ್ಸೆಗಾಗಿ ಹಾಸಿಗೆ ದೊರೆಯದೆ ಕಂಗಾಲಾಗಿದ್ದಾರೆ. ನೆಬ್ರಾಸ್ಕಾ ರಾಜ್ಯದಲ್ಲಿಯೂ ಕೆಲವೇ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ತುಂಬಿತುಳುಕುವ ಸಾಧ್ಯತೆಯಿದೆಯೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕನ್ಸಾಸ್,ಮಿಸ್ಸೌರಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಸೋಂಕಿತರ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ವೈದ್ಯಕೀಯ ಅಧಿಕಾರಿಗಳು ನಿಗದಿತ ಶಸ್ತ್ರಕ್ರಿಯೆಗಳ್ನೃು ವಿಳಂಬಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಟ್ರಾವೆಲಿಂಗ್ ನರ್ಸ್ಗಳ ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿವೆ.
ನ್ಯೂಯಾರ್ಕ್ ರಾಜ್ಯದಲ್ಲಿ ಶುಕ್ರವಾರ 21900 ಮಂದಿಯಲ್ಲಿ ಕೋವಿಡ್19 ಸೋಂಕು ದೃಢಪಟ್ಟಿದೆ. ಬಹುತೇಕ ಸಂಖ್ಯೆಯ ಸೋಂಕಿನ ಪ್ರಕರಣಗಳು ಲಸಿಕೀಕರಣಗೊಳ್ಳದ ವ್ಯಕ್ತಿಗಳಲ್ಲಿಯೇ ಪತ್ತೆಯಾಗಿರುವುದಾಗಿ ಕನ್ಸಾಸ್ ಹೆಲ್ತ್ ಸಿಸ್ಟಮ್ ಯೂನಿವರ್ಸಿಟಿಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಸ್ಟೀವ್ ಸ್ಟೈಟ್ಸ್ ತಿಳಿಸಿದ್ದಾರೆ.





