ಒಮೈಕ್ರಾನ್ ಭೀತಿ ನಡುವೆಯೂ ದೇಶದಲ್ಲಿ ಕೋವಿಡ್ ಸೋಂಕು ಇಳಿಕೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದೇಶದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಭಾರತದಲ್ಲಿ ಒಟ್ಟು ಕೋವಿಡ್-19 ಸೋಂಕು ಇಳಿಮುಖವಾಗುತ್ತಿದೆ. ದೇಶದಲ್ಲಿ 19 ತಿಂಗಳಲ್ಲೇ ಮೊದಲ ಬಾರಿಗೆ ಒಂದು ವಾರದ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕೆಳಗಿಳಿದಿದೆ.
ಡಿಸೆಂಬರ್ 13 ರಿಂದ 19ರವರೆಗೆ ದೇಶದಲ್ಲಿ 49 ಸಾವಿರ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರ ಇದ್ದ 55,824 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 12.3ರಷ್ಟು ಕಡಿಮೆ. 2020ರ ಮೇ ತಿಂಗಳಲ್ಲಿ ದೇಶದಲ್ಲಿ ಸಾಂಕ್ರಾಮಿಕ ವ್ಯಾಪಕವಾದ ಬಳಿಕ ಒಂದು ವಾರದ ಅವಧಿಯಲ್ಲಿ 50 ಸಾವಿರಕ್ಕಿಂತ ಕಡಿಮೆ ಪ್ರಕರಣ ವರದಿಯಾಗಿರುವುದು ಇದೇ ಮೊದಲು. 2020ರ ಮೇ 25-31ರ ಅವಧಿಯಲ್ಲಿ 48,858 ಪ್ರಕರಣ ವರದಿಯಾಗಿತ್ತು.
ಅಂತೆಯೇ ಒಂದು ವಾರದ ಅವಧಿಯಲ್ಲಿ ಸಾವಿನ ಸಂಖ್ಯೆ ಕೂಡಾ 2 ಸಾವಿರಕ್ಕಿಂತ ಕೆಳಗೆ ಇಳಿದಿದೆ. ಇದು ಪ್ರಸಕ್ತ ವರ್ಷದ ಅಕ್ಟೋಬರ್ 11-17ರ ಬಳಿಕ ಇದೇ ಮೊದಲು. ದೇಶದಲ್ಲಿ ಡಿಸೆಂಬರ್ 13-19ರ ಅವಧಿಯಲ್ಲಿ 1922 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ 680 ಸಾವಿನ ಪ್ರಕರಣಗಳು ಇತ್ತೀಚೆಗೆ ಸಂಭವಿಸಿದವು. ಉಳಿದ 1242 ಪ್ರಕರಣಗಳ ಪೈಕಿ ಬಹುತೇಕ ಸಾವು ಕೇರಳದಿಂದ ವರದಿಯಾಗಿದೆ.
ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 20ರಷ್ಟು ಇಳಿಕೆಯಾಗಿದೆ. ಕಳೆದ ವಾರ 28,684 ಪ್ರಕರಣಗಳು ವರದಿಯಾಗಿದ್ದ ಕೇರಳದಲ್ಲಿ ಈ ಬಾರಿ 22984 ಪ್ರಕರಣಗಳು ಬೆಳಕಿಗೆ ಬಂದಿವೆ. ಹಲವು ವಾರಗಳಲ್ಲಿ ಮೊದಲ ಬಾರಿಗೆ ದೇಶದ ಒಟ್ಟು ಪ್ರಕರಣಗಳ ಪೈಕಿ ಕೇರಳದ ಪ್ರಕರಣಗಳು ಶೇಕಡ 50ಕ್ಕಿಂತ ಕಡಿಮೆ ಇವೆ. ಈ ವಾರ ಕೇರಳದ ಪಾಲು ಶೇಕಡ 47ರಷ್ಟಾಗಿದೆ. ಬಹುತೇಕ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಸತತ ಎರಡನೇ ವಾರ ಪ್ರಕರಣಗಳು ಹೆಚ್ಚಿವೆ.