ಚಾಮರಾಜನಗರ : ರೈತನ ಮೇಲೆ ಕಾಡಾನೆ ದಾಳಿ

ಚಾಮರಾಜನಗರ :ಜಮೀನು ಕಾವಲಿಗೆ ತೆರಳಿದ್ದ ರೈತನೋರ್ವನ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕೊತ್ತನೂರು ವಲಯದ ಮತ್ತೀಪುರ ಗ್ರಾಮದ ಹೊರವಲಯದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಮತ್ತೀಪುರ ಗ್ರಾಮದ ಮಹದೇವಸ್ವಾಮಿ (35) ಕಾಡಾನೆ ದಾಳಿಯಿಂದ ಗಾಯಗೊಂಡವರು ಎಂದು ತಿಳಿದುಬಂದಿದೆ.
ಮಹದೇವಸ್ವಾಮಿ ರವಿವಾರ ರಾತ್ರಿ ಜಮೀನು ಕಾವಲಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಪಕ್ಕದ ಜಮೀನಿನಲ್ಲಿ ನಿಂತಿದ್ದ ಆನೆಯೊಂದು ಮಹದೇವಸ್ವಾಮಿಯನ್ನು ನೋಡಿ ದಾಳಿ ನಡೆಸಿದ ಪರಿಣಾಮ ಅವರಿಗೆ ಸೋಂಟ, ಕೈಗೆ ಗಭೀರ ಗಾಯಗಳಾಗಿವೆ.
ಈ ವೇಳೆ ಆನೆ ಬೈಕ್ ಅನ್ನು ಬೇಲಿಗೆ ಎಸೆದು ಜಖಂಗೊಳಿಸಿದೆ. ಈ ಬಗ್ಗೆ ಪಕ್ಕದ ಜಮೀನಿನವರಿಗೆ ವಿಚಾರ ತಿಳಿದು ಗ್ರಾಮಸ್ಥರ ಸಹಾಯದಿಂದ ಗಾಯಾಳುವನ್ನು ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.





