ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ: ಸರ್ಕಾರದ ವೈಫಲ್ಯವಿದೆ ಎಂದ ಸಿದ್ದರಾಮಯ್ಯ

ಬೆಳಗಾವಿ, ಡಿ.20: ರಾಜ್ಯದಲ್ಲಿ ಗುಪ್ತಚರ ಇಲಾಖೆ ಅನ್ನೋದು ಸತ್ತು ಹೋಗಿದೆ. ಆಡಳಿತದ ಮೇಲೆ ಈ ಸರಕಾರಕ್ಕೆ ಹಿಡಿತ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸೋಮವಾರ ಬೆಳಗಾವಿಯ ಅನಗೋಳದಲ್ಲಿ ಎಂಇಎಸ್ ಕಾರ್ಯಕರ್ತರಿಂದ ಅವಮಾನಸಲ್ಪಟ್ಟಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು ಖಂಡನೀಯ. ಎಂ.ಇ.ಎಸ್.ನವರು ಪುಂಡರು. ಅವರಿಗೆ ಕಾನೂನು ಇಲ್ಲ, ಏನೂ ಇಲ್ಲ. ಈ ಘಟನೆಯಲ್ಲಿ ಸರಕಾರದ ವೈಫಲ್ಯವಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಎಂ.ಇ.ಎಸ್.ನಿಷೇಧಿಸಬೇಕು ಎಂದು ಜನ ಹೇಳುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಅವರು ಹೇಳಿದರು.
ಸಂಗೊಳ್ಳಿ ರಾಯಣ್ಣ ಯಾವುದೋ ಒಂದು ಜಾತಿಗೆ ಸೀಮಿತವಾಗಿಲ್ಲ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿ, ದೇಶಭಕ್ತ. ಅಂತವರ ಪುತ್ಥಳಿಯನ್ನು ವಿರೂಪ ಮಾಡಿದಂತಹ ಕಿಡಿಗೇಡಿಗಳಿಗೆ ಶಿಕ್ಷೆ ಆಗಲೇಬೇಕು. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.








