ಮೊಟ್ಟೆ ವಿರೋಧಿಗಳು ಹಾಗೂ ಆಧುನಿಕ ಔಷಧಿಗಳು

ಇಂದಿನ ಯುಗದಲ್ಲಿ ಐಷಾರಾಮಿ ಜೀವನದ ನೆಪದಲ್ಲಿ ಎಲ್ಲ ಆಧುನಿಕ ಸೌಲಭ್ಯಗಳನ್ನು ಅನುಭವಿಸುತ್ತಿರುವ ಮಾನವ ಆಗಾಗ ಲಜ್ಜೆ ಬಿಟ್ಟು ತಾನು ಮಹಾನ್ ಸಂಪ್ರದಾಯವಾದಿ ಎಂದು ಬಹಿರಂಗವಾಗಿ ತೋರಿಸಲು ಹವಣಿಸುತ್ತಾನೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರು ಮಡಿವಂತರ ಬಗ್ಗೆ ಹೇಳಿದ ಮಾರ್ವಿಕವಾದ ಮಾತುಗಳನ್ನು ವಿರೋಧಿಸಿ ಬೊಬ್ಬೆಹೊಡೆದ ಮಡಿವಂತ ಪ್ರತಿಗಾಮಿಗಳು ಹಾಗೂ ಸರಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆ ವಿರೋಧಿಸಿ ಬಸವಣ್ಣನವರ ಹೆಸರಿನಲ್ಲಿ ಬೊಬ್ಬೆ ಹೊಡೆಯುತ್ತಿರುವ ಮಡಿವಂತ ಕಾವಿಗಳು. ಈ ಕಾವಿಗಳು ಬಸವಣ್ಣನವರ ಬಗ್ಗೆ ಭಾವನಾತ್ಮಕ ಜಾತಿ ಐಡೆಂಟಿಟಿ ಹೊಂದಿವೆಯೇ ಹೊರತು ಬಸವಣ್ಣನವರ ಅರಿವಿನ ಚಿಂತನೆ ಹೊಂದಿಲ್ಲ.
ಲೌಕಿಕ ಬದುಕಿನ ಕಷ್ಟಕೋಟಲೆಗಳಿಗೆ ಹೆದರಿ ತೋರಿಕೆಯ ಸನ್ಯಾಸ ಸ್ವೀಕರಿಸಿ ಅತ್ಯಾಧುನಿಕ ಸೌಲಭ್ಯವುಳ್ಳ ಐಷಾರಾಮಿ ಪರಾವಲಂಬಿ ಹಾಗೂ ಬೇಜವಾಬ್ದಾರಿ ಬದುಕು ನಡೆಸುತ್ತಿರುವ ಇಂದಿನ ಬಹುತೇಕ ಕಾವಿಗಳು ಅನೇಕ ಆಧುನಿಕ ರೋಗಗಳಿಂದ ಬಳುತ್ತಿರುವುದು ಸುಳ್ಳಲ್ಲ. ಅನೇಕ ಕಾವಿಗಳು ತಮ್ಮ ಗುಪ್ತ ಲಂಪಟತನದಿಂದ ಲೈಂಗಿಕ ರೋಗಗಳಿಂದಲೂ ಬಳಲುವುದಿದೆ. ಹೀಗೆ ಮನಸ್ಸು ಹಾಗೂ ದೇಹ ಎರಡೂ ರೋಗಗ್ರಸ್ತಗೊಂಡಿರುವ ಕಾವಿಗಳು ಆಗಾಗ ಸಂಪ್ರದಾಯದ ಹೆಸರಿನಲ್ಲಿ ಸಮಾಜದ ಆರೋಗ್ಯವನ್ನು ಕೂಡ ಕದಡುವ ಕೃತ್ಯ ಮಾಡುತ್ತಿರುತ್ತವೆ. ಹೀಗೆ ಮಾಂಸಾಹಾರ ಮತ್ತು ಮೊಟ್ಟೆಯನ್ನು ಮೇಲ್ನೋಟಕ್ಕೆ ವಿರೋಧಿಸುವ ಈ ಡೋಂಗಿ ಸಾಂಪ್ರದಾಯವಾದಿಗಳು ಕದ್ದುಮುಚ್ಚಿ ಮಾಂಸ ಸೇವಿಸುವುದೂ ಇದೆ.
ಆಹಾರ ವ್ಯಕ್ತಿಯ ವೈಯಕ್ತಿಕ ಆಯ್ಕೆ ಮತ್ತು ಅದು ಆತನ ಹಕ್ಕು ಕೂಡ. ಆದರೆ ಇಂದಿನ ಆಧುನಿಕ ಯುಗದಲ್ಲಿ ಶುದ್ಧ ಸಸ್ಯಾಹಾರಿಗಳಾಗಿ ಇರಲು ಸಾಧ್ಯವೇ ಎಂದು ನಾವೆಲ್ಲರೂ ಯೋಚಿಸಬೇಕಿದೆ. ಆಧುನಿಕ ಬೇಕರಿ ಆಹಾರ ಉತ್ಪನ್ನಗಳಾದ ವಿವಿಧ ಬಗೆಯ ಕೇಕ್‌ಗಳಲ್ಲಿ ಪ್ರಾಣಿಜನ್ಯ ಕೊಬ್ಬುಗಳ ಮತ್ತು ಮೊಟ್ಟೆಯ ಬಳಕೆ ಸಾಮಾನ್ಯ. ಶಾಲೆಯಲ್ಲಿ ಮೊಟ್ಟೆ ವಿತರಣೆ ವಿರೋಧಿಸುವ ಅನೇಕರು ಇದುವರೆಗೆ ಬೇಕರಿ ಐಟಮ್ಸ್ ತಿಂದೆ ಇಲ್ಲ ಎಂದು ಹೇಳಲಾರರು. ಇನ್ನು ಸಮಾರಂಭಗಳಲ್ಲಿ ತಯಾರಿಸುವ ಅಡುಗೆಗಳಲ್ಲಿ ಮತ್ತು ಹೊಟೇಲ್ ಆಹಾರಗಳಲ್ಲಿ ಪ್ರಾಣಿಜನ್ಯ ಕೊಬ್ಬುಗಳಿಂದ ತಯ್ಯಾರಿಸಿದ ವನಸ್ಪತಿ(ಡಾಲ್ಡಾ) ಉಪಯೋಗ ಹೇರಳವಾಗಿ ಮಾಡಲಾಗುತ್ತದೆ. ಮೊಟ್ಟೆ ವಿರೋಧಿಗಳು ಈ ಆಹಾರಗಳನ್ನು ಸೇವಿಸದೆ ಇರಲಾರರು.
ಅಷ್ಟೇ ಏಕೆ? ನಾವೆಲ್ಲ ದಿನನಿತ್ಯ ಬಳಸುವ ಹಾಲು ಮತ್ತು ಹಾಲಿನ ಉತ್ಪನ್ನಗಳೆಲ್ಲವೂ ಪ್ರಾಣಿಜನ್ಯ ಎನ್ನುವ ಸಂಗತಿ ನಮಗೆಲ್ಲ ತಿಳಿದಿದೆ. 1 ಲೀಟರ್ ಹಾಲು ಉತ್ಪಾದಿಸಲು ಕನಿಷ್ಠ 500 ಲೀಟರ್ ರಕ್ತವು ಎಮ್ಮೆ/ಹಸುವಿನ ಕೆಚ್ಚಲಿನ ಮೂಲಕ ಹಾದು ಹೋಗಬೇಕು. ಒಂದು ಎಮ್ಮೆ/ಹಸು ದಿನಕ್ಕೆ 60 ಲೀಟರ್ ಹಾಲನ್ನು ಉತ್ಪಾದಿಸಿದಾಗ, ಅಂದಾಜು 30,000 ಲೀಟರ್ ರಕ್ತವು ಆ ಪ್ರಾಣಿಯ ಮ್ಯಾಮರಿ ಗ್ರಂಥಿಯ ಮೂಲಕ ಪರಿಚಲನೆಯಾಗುತ್ತದೆ. ಅಂದರೆ ಹಾಲು ನಿಶ್ಚಿತವಾಗಿ ಒಂದು ಮಾಂಸಾಹಾರ. ಆದರೆ ನಾವು ನಮ್ಮ ಅನುಕೂಲಕ್ಕಾಗಿ ಅದನ್ನು ಸಸ್ಯಾಹಾರವಾಗಿ ಗುರುತಿಸುತ್ತೇವೆ. ಹಾಲಿನ ಉತ್ಪನ್ನಗಳು ಕೇವಲ ಆಹಾರವಾಗಿ ಬಳಸುವುದಷ್ಟೇ ಅಲ್ಲದೆ ಅವನ್ನು ಪೂಜಾರ್ಹವೆಂತಲು ಹಾಗೂ ಪವಿತ್ರವೆಂತಲೂ ಬಿಂಬಿಸಿಕೊಂಡು ಬಂದಿದ್ದೇವೆ.
ಈಗ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು ವಿರೋಧಿಸುತ್ತಿರುವ ಕಾವಿ ಡಾಂಬಿಕರ ಬೇಡಿಕೆ ಏನೆಂದರೆ ಸರಕಾರ ಮೊಟ್ಟೆ ವಿತರಣೆ ನಿಲ್ಲಿಸಬೇಕು? ಅಥವಾ ಮೊಟ್ಟೆಗಳನ್ನು ಮಾಂಸಾಹಾರಿ ಮಕ್ಕಳಿಗೆ ಪಾರ್ಸಲ್ ಕೊಡಬೇಕು ಅಥವಾ ಮೊಟ್ಟೆಗೆ ಪರ್ಯಾಯ ಪ್ರೊಟೀನ್‌ಯುಕ್ತ ಆಹಾರ ಕೊಡಬೇಕು ಎನ್ನುವುದು. ಶಾಲೆಯಲ್ಲಿ ಸಾಮೂಹಿಕವಾಗಿ ಮೊಟ್ಟೆ ವಿತರಿಸಿದರೆ ಸಸ್ಯಾಹಾರಿ ಮಕ್ಕಳಿಗೆ ಮುಜುಗರ ಆಗುತ್ತದೆಂದು ಕ್ಷಣಕಾಲ ಒಪ್ಪೋಣ. ಹೀಗೆ ಬೇಡಿಕೆ ಇಟ್ಟಿರುವ ಕಾವಿಗಳು ಒಂದು ವೇಳೆ ಕಾಯಿಲೆಯಿಂದ ಆಸ್ಪತ್ರೆಗೆ ಹೋದಾಗ ವೈದ್ಯರು ಕ್ಯಾಪ್ಸೂಲ್ ರೂಪದ ಘನ ಔಷಧಿ ಶಿಫಾರಸು ಮಾಡಿದರೆ ಆಗ ಇವರು ಏನು ಮಾಡುತ್ತಾರೆ? ಕ್ಯಾಪ್ಸೂಲ್ ಮಾತ್ರೆ ಸೇವಿಸುತ್ತಾರಾ? ನಿರಾಕರಿಸುತ್ತಾರಾ ಅಥವಾ ಅದಕ್ಕೆ ಪರ್ಯಾಯ ಔಷಧಿಗಾಗಿ ವೈದ್ಯರಲ್ಲಿ ಮನವಿ ಮಾಡುತ್ತಾರಾ? ಒಂದು ವೇಳೆ ಕ್ಯಾಪ್ಸೂಲ್‌ಗೆ ಪರ್ಯಾಯ ಔಷಧಿ ಇಲ್ಲದಿದ್ದರೆ ಏನು ಮಾಡುತ್ತಾರೆ?
ಅದಕ್ಕೂ ಮೊದಲು ಔಷಧಿಯನ್ನು ಹೊಂದಿರುವ ಈ ಕ್ಯಾಪ್ಸೂಲ್ ಸೆಲ್‌ಗಳು ಯಾವ ಪದಾರ್ಥದಿಂದ ತಯಾರಿಸಿರುತ್ತಾರೆಂಬುದನ್ನು ತಿಳಿದುಕೊಳ್ಳೋಣ. ಔಷಧಿಯನ್ನು ತುಂಬಲು ಬಳಸುವ ಈ ಕ್ಯಾಪ್ಸೂಲ್ ಸೆಲ್‌ಗಳು ಮುಖ್ಯವಾಗಿ ಜಿಲ್ಯಾಟಿನ್ ಎಂಬ ಜೀವರಸಾಯನಿಕ ಪದಾರ್ಥದಿಂದ ತಯಾರಿಸಲಾಗುತ್ತವೆ. ಹಾಗಾದರೆ ಏನು ಈ ಜಿಲ್ಯಾಟಿನ್? ಜಿಲ್ಯಾಟಿನ್ ಒಂದು ಸಸಾರಜನಕ (ಪ್ರೊಟೀನ್) ಆಹಾರ ಪದಾರ್ಥವಾಗಿದ್ದು ಅದು ಹಸು? ಹಂದಿ ಮುಂತಾದ ಪ್ರಾಣಿಗಳ ಮೂಳೆ? ಚರ್ಮ? ಕೊಲ್ಯಾಜೆನ್? ಮುಂತಾದ ಅಂಗಾಂಶಗಳಿಂದ ವಿಶೇಷ ರಸಾಯನಿಕ ಪ್ರಕ್ರಿಯೆಯ ಮೂಲಕ ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಡಿಸಲಾದ ಜಿಲ್ಯಾಟಿನನ್ನು ಔಷಧಿ ತುಂಬಲು ಸೂಕ್ತವಾದ ಕ್ಯಾಪ್ಸೂಲ್ ಸೆಲ್‌ಗಳಾಗಿ ಮಾರ್ಪಡಿಸಲಾಗುತ್ತದೆ. ಹಾಗಾಗಿ ಕ್ಯಾಪ್ಸೂಲ್ ಸೇವಿಸುವುದೆಂದರೆ ಹಸು-ಹಂದಿ ಮುಂತಾದ ಪ್ರಾಣಿಗಳ ಅಂಗಾಂಶಗಳಿಂದ ಬೇರ್ಪಡಿಸಿದ ಪದಾರ್ಥ ಸೇವಿಸಿದಂತೆಯೇ.
(fermentation) ಇನ್ನು ಇಂದಿನ ಆಧುನಿಕ ಕಾಲದಲ್ಲಿ ನಾವೆಲ್ಲಾ ಬಳಸುವ ಜೀವರಕ್ಷಕ ಪ್ರತಿಜೀವಕ ಔಷಧಿಗಳಂತೂ (ಆ್ಯಂಟಿಬಯಾಟಿಕ್ಸ್) ಹುದುಕುವಿಕೆ ತಂತ್ರಜ್ಞಾನದ ಮುಖೇನ ಉತ್ಪಾದಿಸಲಾಗುತ್ತದೆ. ಬಹುತೇಕ ಪ್ರತಿ ಜೀವಕಗಳು ಸೂಕ್ಷ್ಮಾಣು ಜೀವಿಗಳಿಂದ ತಯಾರಿಸಲಾಗುತ್ತದೆ ಎನ್ನುವ ಸಂಗತಿ ನಾವೆಲ್ಲ ತಿಳಿದುಕೊಳ್ಳಬೇಕಿದೆ. ಇನ್ನು ಸೇರಮ್- ರಕ್ತ ಮತ್ತು ರಕ್ತದ ಉತ್ಪನ್ನಗಳಂತೂ ಮೇಕೆ, ಕುದುರೆ, ಹಂದಿ, ಹಸುವಿನ ಎಳೆಗರು ಮುಂತಾದ ಪ್ರಾಣಿಗಳಿಂದ ಉತ್ಪಾದಿಸಲಾಗುತ್ತದೆ. ನಾವು ಪಡೆಯುವ ವ್ಯಾಕ್ಸಿನ್‌ಗಳು ಕೂಡ ಪ್ರಾಣಿಜನ್ಯ ಔಷಧಿಗಳು ಎನ್ನುವುದು ನಾವು ಮರೆಯದಿರೋಣ. ಹೀಗೆ ಬಹುತೇಕ ಔಷಧಿಗಳು ಪ್ರಾಣಿಗಳ ರಕ್ತ, ಮಾಂಸ ಅಥವಾ ಅಂಗಾಂಶಗಳಿಂದ ತಯಾರಿಸಿದವುಗಳಾಗಿರುತ್ತವೆ ಎನ್ನುವ ಕನಿಷ್ಠ ಪ್ರಜ್ಞೆ ನಮಗಿರಬೇಕು.
ನಮ್ಮಲ್ಲಿ ಅನೇಕ ಜನರು ಮಲ್ಟಿವಿಟಮಿನ್ ಟಾನಿಕ್‌ಗಳನ್ನು ಬಳಸುತ್ತೇವೆ. ನೀರಿನಲ್ಲಿ ಕರಗದಿರುವ ಜೀವಸತ್ವಗಳಾದ (ವಿಟಮಿನ್ಸ್) ಎಡಿಇ ಮತ್ತು ಕೆ ವಿಟಮಿನ್‌ಗಳು ಬಹುತೇಕ ಪ್ರಾಣಿಗಳಿಂದಲೇ ದೊರೆಯುತ್ತವೆ. ಕಾಡ್ ಲಿವರ್ ಮತ್ತು ಫಿಶ್ ಲಿವರ್ ಎಣ್ಣೆಯಲ್ಲಿ ವಿಟವಿನ್ ಎ ಜೀವಸತ್ವ ದೊರೆಯುತ್ತದೆ. ಮಲ್ಟಿವಿಟಮಿನ್ ಟಾನಿಕ್ ಸೇವಿಸುವವರು ಈ ಮೀನಿನ ಎಣ್ಣೆಗಳನ್ನು ಸೇವಿಸಲೇಬೇಕಿದೆ. ಇನ್ನು ಮಧುಮೇಹ ಇಂದು ಒಂದು ಸರ್ವೇಸಾಮಾನ್ಯ ರೋಗವಾಗಿದೆ. ಮಧುಮೇಹವನ್ನು ಗುಣಪಡಿಸಲು ಉಪಯೋಗಿಸುವ ಇನ್ಸುಲಿನ್ ಎನ್ನುವ ಔಷಧಿಯು ಹಂದಿ ಮತ್ತು ಹಸುವಿನ ಪ್ಯಾಂಕ್ರಿಯಾ ಎಂಬ ಗ್ರಂಥಿಯಿಂದ ಉತ್ಪಾದಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಜೀರ್ಣಕಾರಿ ಎಂಜೈಮ್ಸ್‌ಗಳು, ರಸಧೂತಗಳು (ಹಾರ್ಮೋನ್ಸ್), ಜೆನೆಟಿಕ್ ಉತ್ಪಾದನೆಗಳು ಮತ್ತು ಇನ್ನೂ ಅನೇಕ ಜೀವರಸಾಯನಿಕ ಔಷಧಿಗಳು ಪ್ರಾಣಿಗಳ ವಿವಿಧ ಅಂಗಾಂಶಗಳಿಂದ ಉತ್ಪಾದಿಸಲಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ನಮಗಿರಬೇಕು.
ಇನ್ನು ನಾವು ತೀವ್ರ ಅನಾರೋಗ್ಯಕ್ಕೆ ತುತ್ತಾದಾಗ ಕೆಲವೊಮ್ಮೆ ಶಸ್ತ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಸಣ್ಣ ಅಥವಾ ದೊಡ್ಡ ಶಸ್ತ್ರ ಕ್ರಿಯೆಗಳು ಮಾಡಿದಾಗ ಛೇದಿಸಿದ ಅಂಗಾಂಗವನ್ನು ಮರು ಜೋಡಿಸಲು ನಾವು ಸರ್ಜಿಕಲ್ ಸ್ಯೂಚರ್ಸ್ ಮತ್ತು ಲಿಗೇಚರ್ಸ್ ಗಳನ್ನು ಬಳಸುತ್ತೇವೆ. ಇವುಗಳಲ್ಲಿ ಕರಗುವ ಸ್ಯೂಚರ್ಸ್ ಮತ್ತು ಲಿಗೇಚರ್ಸ್‌ಗಳು ಪ್ರಾಣಿಗಳ ದೇಹದ ಕರುಳಿನ ಭಾಗ ಸೀಳಿ ಮಾಡಲಾಗಿರುತ್ತವೆ. ಹೊಲಿಗೆ ಹಾಕಿದ ಈ ಸರ್ಜಿಕಲ್ ದಾರಗಳನ್ನು ಮತ್ತೆ ಬಿಚ್ಚಲಾಗುವುದಿಲ್ಲ. ಅವು ಶಸ್ತ್ರಕ್ರಿಯೆ ಮಾಡಲಾದ ಸ್ಥಳದಲ್ಲೇ ಬಿಡಲಾಗಿ ಗಾಯವನ್ನು ಮಾಯಿಸಿ ಅವೂ ಕೂಡ ರೋಗಿಯ ದೇಹದಲ್ಲೇ ಕರಗಿ ಹೋಗುತ್ತವೆ. ಹೀಗೆ ನಾವು ಒಂದಿಲ್ಲ ಒಂದುವೇಳೆ ಪ್ರಾಣಿಜನ್ಯ ಔಷಧಿಗಳು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ.
ಈಗ ಹೇಳಿ ಮಡಿವಂತರೆ?. ನಿಮ್ಮ ಮಡಿಯನ್ನು ಕಾಪಾಡಿಕೊಳ್ಳಲು ನಾನು ಮೇಲೆ ಚರ್ಚಿಸಿದ ಯಾವುದೇ ಬಗೆಯ ಬೇಕರಿ ಉತ್ಪನ್ನಗಳನ್ನು ಸೇವಿಸುವುದಾಗಲಿ, ಮೇಲೆ ನಮೂದಿಸಿದ ಪ್ರಾಣಿಜನ್ಯ ಔಷಧಿಗಳನ್ನು ಯಾವುದೇ ಸ್ಥಿತಿಯಲ್ಲಿ ಬಳಸುವುದಾಗಲಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬಲ್ಲಿರಾ? ಆಧುನಿಕ ಬದುಕಿನ ಪ್ರತಿಯೊಂದು ಸೌಲಭ್ಯಗಳನ್ನು ನಮ್ಮ ಎಲ್ಲ ಬಗೆಯ ಪರಂಪರಾಗತ ರೂಢಿಗಳನ್ನು ಬದಿಗೊತ್ತಿ ಬಳಸುವ ನೀವು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ಯಾಕೆ ವಿರೋಧಿಸುತ್ತಿದ್ದೀರಿ? ಯಾವುದೋ ಕಾಲದಲ್ಲಿ ಬೋಧಿಸಲಾದ ಧಾರ್ಮಿಕ ತತ್ವಗಳನ್ನು ಕಾಲಕ್ಕೆ ತಕ್ಕಹಾಗೆ ಪರಿವರ್ತಿಸಲು ಆಗುವುದಿಲ್ಲವೇ? ಆಗುವುದಿಲ್ಲ ಎಂದಾದರೆ ನೀವು ಎಲ್ಲ ಬಗೆಯ ಆಧುನಿಕ ಸೌಲಭ್ಯಗಳನ್ನು ವಿಸರ್ಜಿಸಿ ಕಾಡು ಮೇಡುಗಳ ಗವಿಗಳಲ್ಲಿ ಜೀವಿಸುತ್ತ್ತಾ ಬೇಯಿಸದ ಗೆಡ್ಡೆ ಗೆಣಸುಗಳನ್ನು ಸೇವಿಸುತ್ತಾ ಜೀವಿಸಲು ಆರಂಭಿಸುವಿರಾ?







