ಪನಾಮ ಪೇಪರ್ಸ್ ಲೀಕ್ ಪ್ರಕರಣ: ನಟಿ ಐಶ್ವರ್ಯಾ ರೈಗೆ ಇಡಿ ಸಮನ್ಸ್

ಹೊಸದಿಲ್ಲಿ, ಡಿ. 20: ‘ಪನಮಾ ಪೇಪರ್ಸ್’ಗೆ ಸಂಬಂಧಿಸಿದ ವಿದೇಶಿ ವಿನಿಮಯ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ವಿಚಾರಣೆ ಎದುರಿಸಿದ ಬಳಿಕ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಿಂದ ಸೋಮವಾರ ರಾತ್ರಿ ನಿರ್ಗಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಚಾರಣೆಗೆ ಸಮನ್ಸ್ ನೀಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಬ್ರಿಟೀಶ್ ವರ್ಜಿನ್ ಐಲ್ಯಾಡ್ ಮೂಲದ ಕಂಪೆನಿಯಲ್ಲಿ ತಾನು ಹಣ ಇರಿಸಿದ್ದೇನೆ ಎಂಬ ಅವರ ಪ್ರತಿಪಾದನೆ ಕುರಿತಂತೆ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾ ಬಚ್ಚನ್ ಅವರ 48ರ ಹರೆಯದ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಈ ಹಿಂದೆ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ಎರಡು ಬಾರಿ ಕಾಲಾವಕಾಶ ಕೋರಿದ್ದರು. ಐಶ್ವರ್ಯಾ ರೈ ಬಚನ್ ಅವರ ವಿರುದ್ಧದ ಆರೋಪದ ಕುರಿತಂತೆ ಜಾರಿ ನಿರ್ದೇಶನಾಲಯ 2017ರಿಂದ ತನಿಖೆ ಆರಂಭಿಸಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉದಾರೀಕೃತ ಪಾವತಿ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ 2014ರಿಂದ ವಿದೇಶಿ ಪಾವತಿ ಕುರಿತು ವಿವರಣೆ ನೀಡುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ ಬಚ್ಚನ್ ಕುಟುಂಬಕ್ಕೆ ನೋಟಿಸು ಜಾರಿ ಮಾಡಿತ್ತು. ಕಳೆದ 15 ವರ್ಷಗಳಿಂದ ಸ್ವೀಕರಿಸಲಾದ ವಿದೇಶಿ ಪಾವತಿ ದಾಖಲೆಯನ್ನು ಐಶ್ವರ್ಯಾ ರೈ ಅವರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.





