ಹೊನ್ನಾವರ ಬಿಜೆಪಿ ಅಧ್ಯಕ್ಷನಿಂದ ಮಹಿಳೆಯ ಅಶ್ಲೀಲ ವೀಡಿಯೊ ವೈರಲ್: ದೂರು ದಾಖಲು

ಉಮೇಶ ಸಾರಂಗನ
ಹೊನ್ನಾವರ : ಬಿಜೆಪಿ ಹೊನ್ನಾವರ ನಗರಾಧ್ಯಕ್ಷ ಮಹಿಳೆಯೊಬ್ಬರ ಅರೆನಗ್ನ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಘಟನೆ ರವಿವಾರ ವರದಿಯಾಗಿದ್ದು, ಸಂತ್ರಸ್ತ ಮಹಿಳೆ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಹೊನ್ನಾವರ ನಗರ ಘಟಕದ ಅಧ್ಯಕ್ಷ ಉಮೇಶ ಸಾರಂಗನ ಎಂಬಾತ ‘ನಾನು ಅರೆನಗ್ನ ಸ್ಥಿತಿಯಲ್ಲಿ ಸ್ನಾನ ಮಾಡುತ್ತಿರುವ ವೀಡಿಯೊವನ್ನು ವೈರಲ್ ಮಾಡಿದ್ದಾನೆ’ ಎಂದು ಸಂತ್ರಸ್ತ ಮಹಿಳೆ ಹೊನ್ನಾವರ ಠಾಣೆಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವೃತ್ತಿಯಲ್ಲಿ ಆಟೊ ಚಾಲಕನಾಗಿರುವ ಉಮೇಶ ಸಾರಂಗನ ಆಟೊರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪೋನ್ ನಂಬರ್ ಪಡೆದುಕೊಂಡಿದ್ದ. ಬಳಿಕ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ. ಕೆಲದಿನಗಳ ಬಳಿಕ ಬೆತ್ತಲೆಯಾಗಿರುವ ವೀಡಿಯೊ ಕೊಡುವಂತೆ ಹಲವು ಬಾರಿ ಒತ್ತಾಯಿಸುತ್ತಿದ್ದ. ಆಗ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದು ದೂರಿನಲ್ಲಿ ತಿಳಿರುವ ಮಹಿಳೆ, ಬಳಿಕ ನಮ್ಮಿಬ್ಬರ ನಡುವಿನ ಸಲುಗೆಯನ್ನು ನನ್ನ ಗಂಡನಿಗೆ ಹೇಳಿ ನನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದ್ದ. ಆತನ ಬೆದರಿಕೆಗೆ ಹೆದರಿ ನಾನು ಬೆತ್ತಲೆಯಾಗಿ ಸ್ನಾನ ಮಾಡುತ್ತಿರುವ ವೀಡಿಯೊ ಮಾಡಿ ಆತನಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿಕೊಟ್ಟಿದ್ದೆ. ಅದನ್ನು ಆತ ವೈರಲ್ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ಮಹಿಳೆ ದೂರು ನೀಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿ ಬಿಜೆಪಿಯ ನಗರ ಅಧ್ಯಕ್ಷ ಉಮೇಶ ಸಾರಂಗನ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು, ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ







