ಹೆಚ್ಚಿನ ಕೊಲೆಗಳು ಇನ್ನಷ್ಟು ಅನಾಥರನ್ನು ಸೃಷ್ಟಿಸುತ್ತವೆ: ಕೊಲೆಯಾದ ಎಸ್ಡಿಪಿಐ ಮುಖಂಡ ಶಾನ್ ತಂದೆ

ಕೆ.ಎಸ್ ಶಾನ್ (Photo: Twitter)
ಆಲಪ್ಪುಳ: ನಗರದ ಆಟೋ ರಿಕ್ಷಾದೊಳಗೆ ಕುಳಿತಿದ್ದ ಎಚ್. ಸಲೀಂರವರಿಗೆ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಒಂದು ದಿನದ ಹಿಂದೆ ಅವರ ಪುತ್ರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆ.ಎಸ್ ಶಾನ್ ದುಷ್ಕರ್ಮಿಗಳಿಂದ ಹತರಾಗಿದ್ದರು. ಅವರು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದವರೆನ್ನಲಾದ ಕೆಲವರು ಕೊಲೆಗೈದಿದ್ದರು. ಕೃತ್ಯಕ್ಕೆ ಪ್ರತೀಕಾರವೆಂಬಂತೆ ಬಿಜೆಪಿ ರಾಜ್ಯ ನಾಯಕ ರಂಜಿತ್ ಶ್ರೀನಿವಾಸ್ (40) ರನ್ನು ಅವರ ಮನೆಯಲ್ಲೇ ಕೊಲ್ಲಲಾಯಿತು. ಈ ಎರಡೂ ಪ್ರಕರಣಗಳು ಆಲಪ್ಪುಳದ ಮನ್ನಾಚೇರಿ ಮತ್ತು ವೆಲ್ಲಕಿನಾರ್ ನಲ್ಲಿ ಕೇವಲ 10 ಕಿ.ಮೀ ದೂರದಲ್ಲಿ ಸಂಭವಿಸಿದೆ.
"ಆತ ನನ್ನ ಮನೆಯ ಅಡಿಪಾಯವಾಗಿದ್ದ. ನಮ್ಮ ಕುಟುಂಬವನ್ನು ಮತ್ತು ವಯಸ್ಸಾದ ನನ್ನನ್ನು ಆರೈಕೆ ಮಾಡುತ್ತಿದ್ದ. ಆತ ಎಲ್ಎಲ್ಬಿ ವರೆಗೆ ಕಲಿತು ಸಮಾಜಕ್ಕೆ ಸಹಾಯ ಮಾಡಿದ್ದಾನೆಯೇ ಹೊರತು ಯಾರ ಮೇಲೂ ಅನ್ಯಾಯವೆಸಗಲಿಲ್ಲ. ಆತ ಯಾರನ್ನೂ ಹೊಡೆಯಲು, ಬಡಿಯಲು, ಕೊಲ್ಲಲು ಹೊರಟವನಲ್ಲ. ಆದರೆ ಬಿಜೆಪಿಯಲ್ಲಿನ ರಕ್ತದಾಹಿಗಳು ನನ್ನ ಮಗನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ" ಎಂದು ಸಲೀಂ ಮಾಧ್ಯಮಗಳೊಂದಿಗೆ ಗದ್ಗದಿತ ಧ್ವನಿಯಲ್ಲಿ ಹೇಳುತ್ತಾರೆ.
ಈ ನೋವಿನಲ್ಲಿಯೂ "ಈ ಕೊಲೆಗಳು ಯಾವತ್ತಿಗೂ ಮುಂದುವರಿಯಬಾರದು" ಎನ್ನುತ್ತಾರೆ ಸಲೀಂ. "ನನ್ನ ಕುಟುಂಬದಲ್ಲಿ ಅನಾಥ ಮಕ್ಕಳನ್ನು ಸೃಷ್ಟಿಸಿದಂತೆಯೇ ಈ ಕೊಲೆಯ ಮುಂದುವರಿದ ಭಾಗಗಳು ಅವರ ಮನೆಯಲ್ಲಿಯೂ ಅನಾಥರನ್ನು ಸೃಷ್ಟಿಸುತ್ತವೆ. ನನಗೆ ಎಲ್ಲಾ ಪಕ್ಷಗಳಲ್ಲಿನ ಸ್ನೇಹಿತರೂ ಇದ್ದಾರೆ. ಸಿಪಿಎಂ, ಬಿಜೆಪಿಗರೂ ಇದ್ದಾರೆ. ನಾವು ಎಲ್ಲಾ ಧರ್ಮೀಯರು ಇಲ್ಲಿ ಸಹಬಾಳ್ವೆಯಿಂದ ಜೀವಿಸುತ್ತಿದ್ದೆವು. ಆದರೆ ಇದೀಗ ನಡೆದಿರುವುದು ನನ್ನಿಂದ ಸಹಿಸಲೂ ಸಾಧ್ಯವಾಗದ ವಿಷಯ" ಎಂದು ಅವರು ಹೇಳಿದ್ದಾರೆ.
ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ಶಾನ್ ಅವರ ಮರಣೋತ್ತರ ಪರೀಕ್ಷೆಯಲ್ಲಿ, ಅವರ ದೇಹದಲ್ಲಿ 40 ಕ್ಕೂ ಹೆಚ್ಚು ಗಾಯಗಳು ಕಂಡುಬಂದಿತ್ತು. ಅವರ ಕತ್ತಿನ ಬಳಿ ಆದ ಗಾಯದಿಂದಲೇ ಅವರ ಮರಣ ಸಂಭವಿಸಿದೆ ಎನ್ನಲಾಗಿದೆ. ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ದಾಳಿ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದರೂ ಅವರನ್ನು ಉಳಿಸಲು ಸಾಧ್ಯವಾಗಿರಲಿಲ್ಲ. ಶಾನ್ ಮೃತದೇಹವನ್ನು ಮನೆಗೆ ತಂದ ವೇಳೆ ಎಸ್ಡಿಪಿಐ ಸದಸ್ಯರು, ಸ್ನೇಹಿತರು ಸೇರಿದಂತೆ ಜನಸ್ತೋಮವೇ ನೆರೆದಿತ್ತು.
ಶಾನ್ ಹತ್ಯೆಯಾದ ಕೆಲವೇ ಗಂಟೆಗಳ ನಂತರ ಬಿಜೆಪಿ ಮುಖಂಡ ರಂಜಿತ್ ಅವರ ಮರಣೋತ್ತರ ಪರೀಕ್ಷೆಯನ್ನು ಅಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ನಡೆಸಲಾಯಿತು. ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ವೈದ್ಯಕೀಯ ಕಾಲೇಜಿಗೆ ಬಂದು ಗೌರವ ಸಲ್ಲಿಸಿದರು. ಅವರ ಪಾರ್ಥಿವ ಶರೀರವನ್ನು ಅವರು ವಕೀಲರಾಗಿದ್ದ ಅಲಪ್ಪುಳ ನ್ಯಾಯಾಲಯಕ್ಕೆ ಕೊಂಡೊಯ್ದು ನಂತರ 'ವಿಲಾಪ ಯಾತ್ರೆ' (ಶೋಕ ಮೆರವಣಿಗೆ) ಯಲ್ಲಿ ಅವರ ಮನೆಗೆ ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ.
ಕೃಪೆ: thenewsminute.com







