ತೆಲಂಗಾಣ: 11ನೇ ತರಗತಿ ಪರೀಕ್ಷೆಯಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣ
ʼಆನ್ಲೈನ್ ತರಗತಿಗಳೆಷ್ಟು ಪರಿಣಾಮಕಾರಿʼ ಎಂದು ಪರಾಮರ್ಶಿಸಲಿರುವ ಶಿಕ್ಷಣ ಇಲಾಖೆ

ಸಾಂದರ್ಭಿಕ ಚಿತ್ರ
ಹೈದರಾಬಾದ್: ಗುರುವಾರ ಪ್ರಕಟವಾದ ರಾಜ್ಯದ 11ನೇ ತರಗತಿಯ ಫಲಿತಾಂಶಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ ಆನ್ಲೈನ್ ತರಗತಿಗಳೆಷ್ಟು ಪರಿಣಾಮಕಾರಿ ಎಂದು ಸಂಬಂಧಿತ ಇಲಾಖೆಗಳು ಪರಾಮರ್ಶಿಸಲಿವೆ. ಈ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಈಗ 12ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಎಪ್ರಿಲ್ ತಿಂಗಳಿನಲ್ಲಿ ಸಾಂಕ್ರಾಮಿಕದಿಂದಾಗಿ ಅಂತಿಮ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದೇ ಇದ್ದುದರಿಂದ ಎಲ್ಲಾ ವಿದ್ಯಾರ್ಥಿಗಳನ್ನೂ ಸಾಮೂಹಿಕವಾಗಿ ತೇರ್ಗಡೆಗೊಳಿಸಲಾಗಿತ್ತು.
ಅಕ್ಟೋಬರ್ 25 ಹಾಗೂ ನವೆಂಬರ್ 3ರ ನಡುವೆ ತೆಲಂಗಾಣ ರಾಜ್ಯ ಇಂಟರ್-ಮೀಡಿಯೇಟ್ ಶಿಕ್ಷಣ ಮಂಡಳಿ 11ನೇ ತರಗತಿಯ ಪರೀಕ್ಷೆ ನಡೆಸಿದ್ದು ಶೇ 49ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಉತ್ತಮ ಅಂತರ್ಜಾಲ ಸೌಲಭ್ಯ ಹಾಗೂ ಡಿಜಿಟಲ್ ಸಾಧನಗಳನ್ನು ಹೊಂದಿದ್ದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಉತ್ತಮ ನಿರ್ವಹಣೆ ತೋರಿದ್ದಾರೆ.
ಒಟ್ಟು 4,59,242 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇವರ ಪೈಕಿ 4,09,911 ಮಂದಿ ಸಾಮಾನ್ಯ ಮತ್ತು 49,3431 ಮಂದಿ ವೃತ್ತಿಪರ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು. ಈ ಎರಡೂ ವಿಭಾಗಗಳಲ್ಲಿ ಕ್ರಮವಾಗಿ 1,99,786 ಹಾಗೂ 24,226 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 56ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಹುಡುಗರಿಗಿಂತ ಮೇಲುಗೈ ಸಾಧಿಸಿದ್ದಾರೆ.ಒಟ್ಟು 1,15,538 ವಿದ್ಯಾರ್ಥಿಗಳು ಎ ಗ್ರೇಡ್ನಲ್ಲಿ ತೇರ್ಗಡೆಗೊಂಡಿದ್ದಾರೆ.
ಸಾಂಕ್ರಾಮಿಕ ಸಂದರ್ಭ ಪರಿಣಾಮಕಾರಿ ಕಲಿಕೆ ಸಾಧ್ಯವಾಗದೇ ಇರುವುದರಿಂದ ಅದಕ್ಕಾಗಿ ವಿದ್ಯಾರ್ಥಿಗಳನ್ನು ಶಿಕ್ಷಿಸಬಾರದೇಂಉ ಹೇಳಿ ಸ್ಟೂಡೆಂಟ್ಸ್ ಫೆಡರೇಶನ್ ಆಪ್ ಇಂಡಿಯಾ ಪ್ರತಿಭಟನೆ ನಡೆಸುತ್ತಿದೆ.
ಅನುತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳನ್ನೂ ತೇರ್ಗಡೆಗೊಳಿಸಬೇಕೆಂದು ತೆಲಂಗಾಣ ಪೋಷಕರ ಸಂಘದ ಅಧ್ಯಕ್ಷ ಎಂ ನಾರಾಯಣ ಆಗ್ರಹಿಸಿದ್ದಾರೆ.