ಶಾಸನ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಸಂಪುಟ ಅನುಮೋದನೆ
ನಾಳೆ ಕಾಯ್ದೆ ಮಂಡನೆ ಸಾಧ್ಯತೆ

ಬೆಳಗಾವಿ(ಸುವರ್ಣವಿಧಾನಸೌಧ), ಡಿ. 20: ರಾಜ್ಯದಲ್ಲಿ ತೀವ್ರ ವಿವಾದ ಮತ್ತು ಕುತೂಹಲಕ್ಕೆ ಕಾರಣವಾಗಿರುವ ಬಲವಂತದ ಮತಾಂತರ ನಿಷೇಧಕ್ಕೆ ಸಂಬಂಧಿಸಿದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ವಿಧೇಯಕ-2021 ಮಂಡನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಸೋಮವಾರ ಮಧ್ಯಾಹ್ನ ಇಲ್ಲಿನ ಸುವರ್ಣವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಸಂಪುಟ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿದ್ದು, ಉದ್ದೇಶಿತ ವಿಧೇಯಕ ಮಂಡನೆ ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಗೊತ್ತಾಗಿದೆ.
ನಾಳೆ(ಡಿ.21) ಅಥವಾ ನಾಡಿದ್ದು ಬೆಳಗಾವಿಯ ಸುವರ್ಣ ವಿಧಾನಸೌಧದ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ವಿಧೇಯಕದ ಕರಡು ಪ್ರತಿ ಸಿದ್ದವಾಗಿದ್ದು, ಕೆಲ ಬದಲಾವಣೆಗಳೊಂದಿಗೆ ವಿಧೇಯಕ ಮಂಡನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮತಾಂತರ ನಿಷೇಧ ಕಾಯ್ದೆ ಕುರಿತು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪರ-ವಿರೋಧ ಚರ್ಚೆ ನಡೆದಿತ್ತು. ಆದರೆ, ಇದೀಗ ಸಚಿವ ಸಂಪುಟದಲ್ಲಿ ಒಮ್ಮತದಿಂದ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿ.24ರ ವರೆಗೆ ಅಧಿವೇಶನ ನಡೆಯಬೇಕಿದ್ದು, ಇನ್ನೂ ಕೇವಲ ನಾಲ್ಕು ದಿನ ಬಾಕಿ ಉಳಿದಿದ್ದು, ಮಂಗಳವಾರ ಅಥವಾ ಬುಧವಾರ ವಿಧೇಯಕ ಮಂಡನೆ ಮಾಡಲು ಸರಕಾರ ತೀರ್ಮಾನಿಸಿದೆ. ಈಗಾಗಲೇ ಅಧಿಕೃತ ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದು, ಕಲಾಪದಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಸರಕಾರದ ಪ್ರತಿನಿಧಿಗಳು ಸಜ್ಜಾಗಬೇಕು. ಜೊತೆಗೆ ಕಾಯ್ದೆ ಜಾರಿ ಹಿಂದಿನ ಉದ್ದೇಶ ಹಾಗೂ ಸಮರ್ಥಿಸಲು ಸಂಪುಟ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಬಲವಂತದ ಮತಾಂತರ ನಿಷೇಧ ವಿಧೇಯಕವನ್ನು ನಾಳೆ(ಡಿ.21)ಯೇ ವಿಧಾನ ಮಂಡಲದಲ್ಲಿ ಮಂಡಿಸಲಿದ್ದೇವೆ’
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ







