"ಹೆಣ್ಣು ತಾಯಿ ಗರ್ಭದಲ್ಲಿ, ಸಮಾಧಿಯಲ್ಲಿ ಮಾತ್ರ ಸುರಕ್ಷಿತವಾಗಿರುತ್ತಾಳೆ" ಎಂದು ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಚೆನ್ನೈ: ಕೆಲವು ದಿನಗಳ ಹಿಂದೆ ನಗರದ ಹೊರವಲಯದಲ್ಲಿರುವ ಮಂಗಾಡು ಎಂಬಲ್ಲಿ 11ನೇ ತರಗತಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಪೋಕ್ಸೋ ಅಡಿಯಲ್ಲಿ ಚೆನ್ನೈ ಪೊಲೀಸರು ಬಂಧಿಸಿದ್ದಾರೆ ಎಂದು ndtv.com ವರದಿ ಮಾಡಿದೆ. ಶನಿವಾರ, ಆಕೆಯ ತಾಯಿ ಮಾರುಕಟ್ಟೆಯಿಂದ ಹಿಂತಿರುಗಿದಾಗ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
"ಹೆಣ್ಣು ತಾಯಿಯ ಗರ್ಭ ಮತ್ತು ಸಮಾಧಿಯಲ್ಲಿ ಮಾತ್ರ ಸುರಕ್ಷಿತವಾಗಿರುತ್ತಾಳೆ" ಎಂದು ಆಕೆಯ ಆತ್ಮಹತ್ಯಾ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದ್ದು, ಈ ಮಾತುಗಳು ಹೇಳಲಾಗದ ನೋವು ಮತ್ತು ಹತಾಶೆಯನ್ನು ಬಹಿರಂಗಪಡಿಸುತ್ತವೆ ಎಂದು ವರದಿ ಬೆಟ್ಟು ಮಾಡಿದೆ. ಇದರ ಹಿಂದಿನ ಪ್ರಕರಣದ ಸಂಪೂರ್ಣ ವಿವರ ಅವರ ಕುಟುಂಬಕ್ಕೂ ತಿಳಿದಿಲ್ಲ ಎನ್ನಲಾಗಿದೆ.
ಯುವಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
"ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಕಳೆದ ಎರಡು ವಾರಗಳಿಂದ ಆಕೆಗೆ ಕಿರುಕುಳ ನೀಡಿ ಚಿತ್ರಹಿಂಸೆ ನೀಡುತ್ತಿದ್ದು, ಅಶ್ಲೀಲ ಸಂದೇಶಗಳು ಮತ್ತು ಫೋಟೊಗಳ ವಿನಿಮಯವನ್ನು ನಾವು ಪತ್ತೆ ಮಾಡಿದ್ದೇವೆ. ಈ ಎಲ್ಲಕ್ಕಿಂತ ಮೊದಲು ಎಂಟು ತಿಂಗಳಿನಿಂದ ಅವರು ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು" ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು NDTV ಗೆ ತಿಳಿಸಿದ್ದಾರೆ.
ಬಾಲಕಿಯ ತಾಯಿ ಕೇವಲ ಒಂದು ಗಂಟೆಯ ಅವಧಿಗೆ ಮಾತ್ರ ಹೊರಗೆ ಹೋಗಿದ್ದು, ಇದೇ ಸಂದರ್ಭ ನೋಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಕೊಠಡಿಯಲ್ಲಿ ಪತ್ತೆಯಾದ ಟಿಪ್ಪಣಿಯಲ್ಲಿ, ಶಾಲೆಯು ಸುರಕ್ಷಿತವಾಗಿಲ್ಲ ಮತ್ತು ಶಿಕ್ಷಕರನ್ನು ನಂಬಲು ಸಾಧ್ಯವಿಲ್ಲ ಎಂದು ಆಕೆ ಉಲ್ಲೇಖಿಸಿದ್ದಾಳೆ. "ಮಾನಸಿಕ ಹಿಂಸೆ" ಯಿಂದ ಓದಲು ಅಥವಾ ಮಲಗಲು ಸಹ ಸಾಧ್ಯವಾಗಲಿಲ್ಲ ಎಂದು ಅವರು ಬರೆದಿದ್ದಾರೆ.
"ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಮತ್ತು ಪುತ್ರರಿಗೆ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವಂತೆ ಕಲಿಸಬೇಕು" ಎಂದು ಆತ್ಮಹತ್ಯೆಗೈದ ವಿದ್ಯಾರ್ಥಿನಿ ಬರೆದಿದ್ದಾರೆ.
ಆಕೆಯ ಆತ್ಮಹತ್ಯೆ ಪತ್ರದ ಆಧಾರದ ಮೇಲೆ ಬಾಲಕಿಗೆ ಇನ್ನಷ್ಟು ಮಂದಿ ಕಿರುಕುಳ ನೀಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
"ಲೈಂಗಿಕ ಕಿರುಕುಳವನ್ನು ನಿಲ್ಲಿಸಿ" ಮತ್ತು "ನನಗೆ ನ್ಯಾಯ (Justice for me)" ಎಂದು ಕೊನೆಗೊಂಡ ಆತ್ಮಹತ್ಯಾ ಟಿಪ್ಪಣಿಯಲ್ಲಿ "ಸಂಬಂಧಿ, ಶಿಕ್ಷಕ, ಎಲ್ಲರೂ" ಎಂಬ ಮೂರು ಸಂಭಾವ್ಯ ಕಿರುಕುಳಗಳನ್ನು ಉಲ್ಲೇಖಿಸಲಾಗಿದೆ.







