ಲೈಂಗಿಕ ಕಿರುಕುಳ ಪ್ರಕರಣ ; ಆರೋಪಿ ವಕೀಲ ರಾಜೇಶ್ ಭಟ್ ಮಂಗಳೂರಿನ ಕೋರ್ಟಿಗೆ ಶರಣು

ಕೆ.ಎಸ್.ಎನ್ ರಾಜೇಶ್ ಭಟ್
ಮಂಗಳೂರು, ಡಿ.20: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಳೆದ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಮಂಗಳೂರಿನ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಮೂರನೆ ಜೆಎಂಎಫ್ಸಿ ನ್ಯಾಯಾಲಯಕ್ಕೆ ಇಂದು ಸಂಜೆ 3 ಗಂಟೆಯ ವೇಳೆಗೆ ಶರಣಾಗಿದ್ದು, ಈತನ ವಿರುದ್ಧ ಅ. 18ರಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು.
ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ರಾಜೇಶ್ ಭಟ್ ಪರ ವಕೀಲರು ಮಂಗಳೂರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿತ್ತು. ಬಳಿಕ ಹೈಕೋರ್ಟ್ನಲ್ಲಿಯೂ ಆತನ ಪರ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದರೂ ಅಲ್ಲಿಯೂ ಜಾಮೀನು ತಿರಸ್ಕೃತಗೊಂಡಿತ್ತು.
ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಗೆ ಸಹಕಾರ ನೀಡಿದ ಆರೋಪದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಆರಂಭದಲ್ಲಿಯೇ ಪೊಲೀಸರು ಬಂಧಿಸಿದ್ದರು. ಬಳಿಕ ಆತನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದ ಮಂಗಳೂರು ಪೊಲೀಸರು ಆತನ ಪತ್ತೆಗೆ ಲುಕ್ ಔಟ್ ನೌಟೀಸು ಕೂಡ ಜಾರಿಗೊಳಿಸಿದ್ದರು.
ಪೊಲೀಸರು ಆರೋಪಿ ರಾಜೇಶ್ ಭಟ್ ನನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದಾರೆಂಬ ಆರೋಪವು ಸಂತ್ರಸ್ತೆ ಹಾಗೂ ಆಕೆಯ ಬೆಂಬಲಿಗರಿಂದ ವ್ಯಕ್ತವಾಗಿತ್ತು.
ಪೊಲೀಸರ ಕಣ್ಣು ತಪ್ಪಿಸಿಯೇ ಓಡಾಡಿಕೊಂಡಿದ್ದ ಆರೋಪಿ ರಾಜೇಶ್ ಭಟ್ ನ ಪತ್ನಿ ಹಾಗೂ ಇನ್ನೋರ್ವ ಸಂಬಂಧಿಯನ್ನು ಇತ್ತೀಚೆಗೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಆದರೆ ರಾಜೇಶ್ ಭಟ್ ಪೊಲೀಸರ ಕೈಗೆ ಸಿಗದೆ ಇಂದು ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಇದೀಗ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೊಳಪಡಿಸಲಿದೆಯೇ ಅಥವಾ ಪೊಲೀಸ್ ಕಸ್ಟಡಿಗೆ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.







