ಬಡಗಬೆಳ್ಳೂರು ಶಾಲಾ ಶತಮಾನೋತ್ಸವ ಕಟ್ಟಡ ಹಸ್ತಾಂತರ

ಬಂಟ್ವಾಳ : ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಟ್ಟಡ ಉದ್ಘಾಟನೆ ಮತ್ತು ಶತಮಾನೋತ್ಸವ ಸಮಾರಂಭವು ಶನಿವಾರ ನಡೆಯಿತು.
ಭವಿಷ್ಯದ ಭಾರತದ ಉತ್ತಮ ನಾಗರಿಕರ ಸೃಷ್ಟಿಯಲ್ಲಿ ಶಾಲೆಯು ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ಊರಿನ ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ಸರಕಾರದ ಅನುದಾನಕ್ಕಾಗಿ ಕಾಯುವ ಬದಲು ಊರಿನ ಹಿರಿಯರು, ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಕೈ ಜೋಡಿಸಿ ಶಾಲೆಯ ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಊರಿನ ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ಸಮಸ್ತರು ಕೈ ಜೋಡಿಸಿದಂತೆಯೇ ಸರಸ್ವತಿಯ ದೇಗುಲವಾಗಿರುವ ಶಾಲೆಯ ಅಭಿವೃದ್ಧಿಯೂ ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಬಡಗಬೆಳ್ಳೂರು ಗ್ರಾಮದ ನಿವಾಸಿಗಳು ಉತ್ತಮ ಹೆಜ್ಜೆ ಇರಿಸಿದ್ದಾರೆ. ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮಾದರಿ ಶಾಲೆಯಾಗಿ ನಿರ್ಮಾಣ ಮಾಡುವ ಜವಾಬ್ದಾರಿ ಊರಿನ ಮುಂದಿದೆ ಎಂದು ರಮಾನಾಥ ರೈ ಹೇಳಿದರು.
ಕರ್ಣಾಟಕ ಬ್ಯಾಂಕ್‍ನ ಚೀಫ್ ಬ್ಯುಸಿನೆಸ್ ಆಫೀಸರ್ ಗೋಕುಲ್‍ದಾಸ್ ಪೈ ಮಾತನಾಡಿ, ಗ್ರಾಮೀಣ ಭಾಗದ ಸರಕಾರಿ ಕನ್ನಡ ಶಾಲೆಯ ಅಭಿವೃದ್ಧಿಗಾಗಿ ಊರಿನವರು ಕೈಗೆತ್ತಿಕೊಂಡ ಯೋಜನೆ ಅಭಿನಂದನಾರ್ಹ. ಇಂತಹ ಯೋಜನೆಗಳಲ್ಲಿ ಕರ್ಣಾಟಕ ಬ್ಯಾಂಕ್ ಸದಾ ಸಹಕಾರ ನೀಡುತ್ತದೆ ಎಂದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಾಣಗೊಂಡ ಶಾಲಾ ಆವರಣ ಗೋಡೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಉದ್ಘಾಟಿಸಿದರು. ಬಳಿಕ ಕೊಡ್ಮಾನ್ ಗುತ್ತು ಮಂಜಯ್ಯ ಶೆಟ್ಟಿ - ಉಳಿಪಾಡಿಗುತ್ತು ಕುಸುಮ ಎಂ. ಶೆಟ್ಟಿ ಹಾಗೂ ದಾನಿಗಳ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.
ಶತಮಾನೋತ್ಸವದ ನೆನಪಿಗಾಗಿ ಹೊರತಂದಿರುವ ಸ್ಮರಣ ಸಂಚಿಕೆ “ಸ್ಮರಣಾಂಜಲಿ”ಯನ್ನು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಕೈರೋಡಿ ಬಿಡುಗಡೆಗೊಳಿಸಿದರು.
ಇದೇ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಉದ್ಯಮಿ ಕೂರಿಯಾಳಗುತ್ತು ಮುಂಡಪ್ಪ ಪಯ್ಯಡೆ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಪ್ರಕಾಶ್ ಆಳ್ವ, ಶಾಲಾ ಮುಖ್ಯೋಪಾಧ್ಯಾಯ ಕೆ.ಕೇಶವ ನಾಯ್ಕ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುಧಾಕರ ಪೂಂಜ, ಶತಮಾನೋತ್ಸವ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ರಘು ಎಲ್.ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚೀಂದ್ರನಾಥ ರೈ, ಕಟ್ಟಡ ಸಮಿತಿಯ ಉಪಾಧ್ಯಕ್ಷ ದಯಾನಂದ ಬಿ., ಏಚಿಲ್ ಕವಿತಾ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹಾಗು ಇತರರು ಉಪಸ್ಥಿತರಿದ್ದರು.
ಶತಮಾನೋತ್ಸವ ಕಟ್ಟಡ ಸಮಿತಿಯ ಅಧ್ಯಕ್ಷ ರಮೇಶ್ಚಂದ್ರ ಭಂಡಾರಿ ಪ್ರಸ್ತಾವಿಕ ಭಾಷಣ ಮಾಡಿದರು. ಶಾಲಾ ಸಂಚಾಲಕರಾದ ಕೆ. ನರೇಂದ್ರನಾಥ ಭಂಡಾರಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಗಂಗಾಧರ ರೈ ವಂದಿಸಿದರು.






.jpeg)
.jpeg)
.jpeg)


.jpeg)
.jpeg)


.jpeg)
.jpeg)


.jpeg)

