ವನ್ಯಜೀವಿ ಸಂರಕ್ಷಣೆಗೆ 386 ಕೋಟಿ ರೂ. ವೆಚ್ಚ: ಸಚಿವ ಉಮೇಶ್ ಕತ್ತಿ

ಬೆಳಗಾವಿ ಸುವರ್ಣವಿಧಾನಸೌಧ, ಡಿ.20: ರಾಜ್ಯದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಕಳೆದ ಎರಡು ವರ್ಷಗಳಲ್ಲಿ ಒಟ್ಟು 386 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು.
ಸೋಮವಾರ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು, ಅರಣ್ಯ ಇಲಾಖೆಯ ವನ್ಯಜೀವಿಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ ಎಂದರು.
ಆನೆ, ಹುಲಿ, ಚಿರತೆ ಮುಂತಾದ ವನ್ಯಪ್ರಾಣಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿದೆ. 2017ರ ಆನೆ ಗಣತಿಯಂತೆ 6049 ಆನೆಗಳು, 2018ರ ಹುಲಿಗಣತಿಯಂತೆ 524 ಹುಲಿಗಳು ರಾಜ್ಯದ ಅಭಯಾರಣ್ಯಗಳಲ್ಲಿವೆ. ಅರೇಬಿಯನ್ ಸಮುದ್ರದ ಹಂಪ್ ಬ್ಯಾಕ್ ತಿಮಿಂಗಿಲ, ಪಕ್ಷಿ ಪ್ರಭೇದಗಳಾದ ಗ್ರೇಟ್ ಇಂಡಿಯನ್ ಬಸ್ಟರ್ಡ್, ಲೆಸ್ಸರ್ ಫ್ಲೋರಿಕಾನ್, ರಣಹದ್ದು ಸಂರಕ್ಷಣೆಗೂ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
2019-20ನೆ ಸಾಲಿನಲ್ಲಿ ಕೇಂದ್ರ ಸರಕಾರದಿಂದ 63.72 ಕೋಟಿ ಹಾಗೂ 2020-21ನೆ ಸಾಲಿನಲ್ಲಿ 66.21 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರಾಜ್ಯ ಸರಕಾರ 2019-20ನೆ ಸಾಲಿನಲ್ಲಿ 139 ಕೋಟಿ ಹಾಗೂ 2020-21ನೆ ಸಾಲಿನಲ್ಲಿ 122 ಕೋಟಿ ರೂ. ವನ್ಯಜೀವಿ ಸಂರಕ್ಷಣೆಗಾಗಿ ಬಿಡುಗಡೆ ಮಾಡಲಾಗಿದ್ದು, ಒಟ್ಟು 386 ಕೋಟಿ ರೂ.ಗಳನ್ನು ಕಳೆದ ಎರಡು ವರ್ಷಗಳಲ್ಲಿ ವ್ಯಯ ಮಾಡಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನವನ, 33 ಅಭಯಾರಣ್ಯ, 14 ಸಂರಕ್ಷಣಾ ಮೀಸಲು ಪ್ರದೇಶ ಹಾಗೂ 1 ಸಮುದಾಯ ಮೀಸಲು ಪ್ರದೇಶವನ್ನು ವನ್ಯಜೀವಿಗಳ ಸಂರಕ್ಷಣೆಗಾಗಿ ಮೀಸಲಿರಿಸಲಾಗಿದೆ ಎಂದ ಅವರು, ವನ್ಯಜೀವಿಗಳಿಗೆ ನೀರಿನ ಸೌಕರ್ಯ, ಆವಾಸ ಅಭಿವೃದ್ಧಿ, ಅರಣ್ಯಗಳಲ್ಲಿನ ಕೆರೆಗಳ ಹೂಳುಎತ್ತುವಿಕೆ, ಚೆಕ್‍ಡ್ಯಾಂ ನಿರ್ಮಾಣ, ನಾಲಾ ಅಭಿವೃದ್ಧಿ, ಸೌರಬೇಲಿ, ಆನೆ ತಡೆಕಂದಕಗಳನ್ನು ನಿರ್ಮಾಣ ಕಾಮಗಾರಿಗಳನ್ನು ರಕ್ಷಿತಾ ಅರಣ್ಯಗಳಲ್ಲಿ ಕೈಗೊಳ್ಳಲಾಗಿದೆ ಎಂದರು.








