ರಾಷ್ಟ್ರ ನಾಯಕರ ಪ್ರತಿಮೆ ವಿರೂಪಗೊಳಿಸುವ ಕಿಡಿಗೇಡಿಗಳನ್ನು ಗಡೀಪಾರು ಮಾಡುವಂತೆ ಸಿದ್ದರಾಮಯ್ಯ ಒತ್ತಾಯ

ಬೆಳಗಾವಿ ಸುವರ್ಣ ವಿಧಾನಸೌಧ, ಡಿ.20: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂ.ಇ.ಎಸ್)ಯ ಪುಂಡಾಟಿಕೆಯನ್ನು ಕನ್ನಡಿಗರು ಇನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡಿಗರ ಉದಾರತೆಯನ್ನು ಪದೇ ಪದೇ ದುರುಪಯೋಗಪಡಿಸಿಕೊಳ್ಳುವ ಎಂ.ಇ.ಎಸ್ ಅನ್ನು ನಿಷೇಧಿಸುವ ಕುರಿತು ಸರಕಾರ ಕಾನೂನುರೀತ್ಯ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡ ಧ್ವಜ ಸುಟ್ಟಿದ್ದು, ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದು ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜ ಅವರ ಪ್ರತಿಮೆಗೆ ಮಸಿ ಬಳಿದಿರುವ ವಿಚಾರವನ್ನು ಪ್ರಸ್ತಾಪಿಸಿ ಅವರು ಮಾತನಾಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿದ ಘಟನೆ ಸಂಬಂಧ ಖಂಡನಾ ನಿರ್ಣಯ ಅಂಗೀಕರಿಸಬೇಕು. ಕನ್ನಡದ ಧ್ವಜ ಕನ್ನಡಿಗರ ಹೆಮ್ಮೆ. ಆ ಧ್ವಜವನ್ನು ಕಿಡಿಗೇಡಿಗಳು ಮಹಾರಾಷ್ಟ್ರದಲ್ಲಿ ಸುಟ್ಟು ಹಾಕಿ ಅಗೌರವ ತೋರಿಸಿದ್ದಾರೆ ಎಂದು ಅವರು ಕಿಡಿಗಾರಿದರು.
ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಇಡೀ ದೇಶದ ಆಸ್ತಿ. ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಆರೂವರೆ ಕೋಟಿ ಕನ್ನಡಿಗರು ಸೇರಿದಂತೆ ಇಡೀ ದೇಶಕ್ಕೆ ಮಾಡಿರುವ ಅವಮಾನ. ಇದು ಪುಂಡು, ಪೆÇೀಕರಿಗಳಿಗೆ ಏಕೆ ಆರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ಬೆಳಗಾವಿಯ ಅನಗೋಳದಲ್ಲಿ ರಾಯಣ್ಣ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಶಿವಾಜಿಯವರ ಪ್ರತಿಮೆ ವಿರೂಪಗೊಳಿಸಲಾಗಿದೆ. ರಾಯಣ್ಣ, ಶಿವಾಜಿ, ಝಾನ್ಸಿರಾಣಿ ಲಕ್ಷ್ಮಿಬಾಯಿ ಈ ಎಲ್ಲರೂ ದೇಶಕ್ಕಾಗಿ ಹೋರಾಟ ಮಾಡಿದವರು ಎಂದು ಸಿದ್ದರಾಮಯ್ಯ ಹೇಳಿದರು.
ಅಂತಹವರ ಪ್ರತಿಮೆಯನ್ನು ವಿರೂಪಗೊಳಿಸುವ ಕಿಡಿಗೇಡಿಗಳು ಬುದ್ಧಿಗೇಡಿಗಳು, ಚಾರಿತ್ರ್ಯಹೀನರು, ಅವಿವೇಕಿಗಳು. ಇಂತಹ ಸ್ವಾತಂತ್ರ್ಯ ಸೇನಾನಿಗಳಿಗೆ ಅವಮಾನ ಮಾಡಿದರೆ ಅದು ಇಡೀ ದೇಶಕ್ಕೆ ಮಾಡಿದ ಅವಮಾನ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ. ಅರ್ಥವಾಗುವಂತೆ ಮಾಡುವ ಕೆಲಸವನ್ನು ಸರಕಾರ ಮಾಡಬೇಕು. ಪುಂಡು, ಪೋಕರಿಗಳನ್ನು ಗಡೀಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಎಂಇಎಸ್‍ನವರು ಪದೇ ಪದೇ ಕಾಲು ಕರೆದು ಜಗಳಕ್ಕೆ ಬರುತ್ತಿದ್ದಾರೆ. ಕನ್ನಡಿಗರು ಉದಾರಿಗಳು, ಸ್ವಾಭಿಮಾನಿಗಳು. ಅದನ್ನೇ ಅವರು ದೌರ್ಬಲ್ಯ ಎಂದು ಭಾವಿಸಿ ತಗಾದೆ ತೆಗೆಯುತ್ತಿದ್ದಾರೆ. ಹೀಗಾಗಿ ಎಂಇಎಸ್ ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸಬೇಕು. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕನ್ನಡಿಗರ ಉದಾರತೆಯನ್ನು ದೌರ್ಬಲ್ಯ ಎಂದು ಭಾವಿಸಿರುವ ಎಂಇಎಸ್‍ನವರು ಮೂರ್ಖರು, ದುರಹಂಕಾರಿಗಳು. ಪುಂಡಾಟಿಕೆ ಮಾಡುವವರನ್ನು ಸರಕಾರ ಬಲಿ ಹಾಕಬೇಕು. ಕನ್ನಡದ ನೆಲ, ಜಲ ಬೇಕು ಎನ್ನುವ ಈ ಪುಂಡರು ನಮ್ಮ ರಾಜ್ಯದಲ್ಲಿ ಇರಲು ಅರ್ಹರೇ ಅಲ್ಲ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲ ಪಕ್ಷಗಳು ಒಂದಾಗಿ ಕನ್ನಡ ನಾಡು ಉಳಿಸುವ ಕೆಲಸ ಮಾಡಬೇಕು. ರಾಯಣ್ಣ ಮತ್ತು ಶಿವಾಜಿಯವರ ಪ್ರತಿಮೆಗೆ ಅವಮಾನ ಮಾಡಿದವರು ಯಾರೇ ಆಗಿರಲಿ, ಸರಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ನೀಚ ಕೆಲಸ ಮಾಡುವುದರಲ್ಲಿ ಎಂಇಎಸ್‍ನವರು ನಿಸ್ಸೀಮರು. ಪದೇ ಪದೇ ಕಿತಾಪತಿ ಮಾಡುವ, ಶಾಂತಿ ಕದಡುವುದು ಅವರ ಕೆಲಸ. ಇದನ್ನು ಇನ್ನು ಕನ್ನಡಿಗರು ಸಹಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕು. ಈ ಸದನದಲ್ಲಿ ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಹಾಗೂ ಪ್ರಧಾನಿಗೆ ಕಳುಹಿಸಿಕೊಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಆದುದರಿಂದ, ಕಿಡಿಗೇಡಿಗಳಿಗೆ ಭಯ ಇಲ್ಲದೆ ಇರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ದುಷ್ಟ ಶಕ್ತಿಗಳಿಗೆ ಬಗ್ಗು ಬಡಿಯಬೇಕು. ಶಿವಾಜಿ-ರಾಯಣ್ಣ ಪ್ರತಿಮೆಗಳಿಗೆ ಅವಮಾನ ಮಾಡಿರುವ ದೇಶದ್ರೋಹಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು.
ಎ.ಟಿ.ರಾಮಸ್ವಾಮಿ, ಜೆಡಿಎಸ್ ಶಾಸಕ
-------------------------------------------
ಕನ್ನಡ ನಾಡು, ನುಡಿಗೆ ಪದೇ ಪದೇ ಅವಮಾನ ಮಾಡುವಂತಹ ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿರ್ಬಂಧಿಸುವ ಮೂಲಕ, ಈ ಪುಂಡರಿಗೆ ತಕ್ಕ ಉತ್ತರ ಕೊಡಬೇಕು. ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಈ ಪುಂಡರಿಗೆ ಗೊತ್ತಿಲ್ಲವೇ? ಕನ್ನಡದ ಧ್ವಜ ಸುಟ್ಟವರ ವಿರುದ್ಧ ಈವರೆಗೆ ಪ್ರಕರಣ ದಾಖಲು ಮಾಡಿಲ್ಲ. ಆದರೆ, ಕನ್ನಡದ ಪರವಾಗಿ ಹೋರಾಟ ಮಾಡುವವರ ಕನ್ನಡಿಗರನ್ನು ಬೀದಿ ಬೀದಿಯಲ್ಲಿ ಬಂಧಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳ ಬಂಧನ ಆಗಿದೆಯೇ?
ಡಾ.ಅನ್ನದಾನಿ, ಜೆಡಿಎಸ್ ಶಾಸಕ
--------------------------------------
ಯಾವುದೋ ಒಂದು ರಾಜ್ಯ, ಭಾಷೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಲು, ಮತ್ತೊಂದು ನಾಡು, ನುಡಿಗೆ ಅವಮಾನ ಮಾಡಿದ್ದು ಸರಿಯಲ್ಲ. ಕನ್ನಡ ಧ್ವಜ ಸುಟ್ಟಿರುವುದು, ಶಿವಾಜಿ, ರಾಯಣ್ಣ ಪ್ರತಿಮೆಗಳಿಗೆ ಅವಮಾನ ಮಾಡಿರುವುದನ್ನು ಒಕ್ಕೊರಲಿನಿಂದ ಖಂಡಿಸಬೇಕು. ಸಮಾಜದ ಸಾಮರಸ್ಯವನ್ನು ಕದಡಲು ಪ್ರಯತ್ನಿಸುತ್ತಿರುವ ಪುಂಡಾಟಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ







