ಉಡುಪಿ: 10ನೇ ರಾಷ್ಟ್ರೀಯ ಪುರುಷರ, ಮಹಿಳೆಯರ ಪ್ಯಾರಾ ಸಿಟ್ಟಿಂಗ್ ವಾಲಿಬಾಲ್
ಆತಿಥೇಯ ಕರ್ನಾಟಕ, ಹರ್ಯಾಣಕ್ಕೆ ಚಾಂಪಿಯನ್ಸ್ ಕಿರೀಟ

ಉಡುಪಿ, ಡಿ.20: ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಪ್ಯಾರಾಲಿಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಮೂರು ದಿನಗಳ ಕಾಲ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 10ನೇ ರಾಷ್ಟ್ರೀಯ ಪುರುಷರ ಮತ್ತು ಮಹಿಳೆಯರ ಪ್ಯಾರಾ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ಆತಿಥೇಯ ಕರ್ನಾಟಕ ಪುರುಷರ ಹಾಗೂ ಹರ್ಯಾಣ ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್ ತಂಡಗಳಾಗಿ ಮೂಡಿಬಂದವು.
ಹೊನಲು ಬೆಳಕಿನಲ್ಲಿ ನಡೆದ ಟೂರ್ನಿಯ ಪುರುಷರ ವಿಭಾಗದಲ್ಲಿ 10 ರಾಜ್ಯ ತಂಡಗಳೂ, ಮಹಿಳೆಯರ ವಿಭಾಗದಲ್ಲಿ ಆರು ತಂಡಗಳು ಪಾಲ್ಗೊಂಡಿದ್ದವು. ಪುರುಷರ ವಿಭಾಗದ ಕರ್ನಾಟಕ ಅಗ್ರಸ್ಥಾನಿಯಾದರೆ, ಹರ್ಯಾಣ ದ್ವಿತೀಯ ಸ್ಥಾನ ಪಡೆದುಕೊಂಡವು.
ಮಹಿಳೆಯರ ವಿಭಾಗದಲ್ಲಿ ಹರ್ಯಾಣ ಪ್ರಥಮ ಸ್ಥಾನ ಪಡೆದರೆ, ರನ್ನರ್ ಅಪ್ ಸ್ಥಾನ ರಾಜಸ್ಥಾನದ ಪಾಲಾಯಿತು. ಕರ್ನಾಟಕ ಮೂರನೇ ಸ್ಥಾನದೊಂದಿಗೆ ಸ್ಪರ್ಧೆಯನ್ನು ಮುಗಿಸಿತು.
ರವಿವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಡಾ.ನವೀನ್ ಭಟ್ ವೈ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ಯಾರಾ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಚಂದ್ರಶೇಖರ್, ಮುಖ್ಯ ತೀರ್ಪುಗಾರರಾದ ಮಾರ್ಟಿನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೋಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.








