ನನ್ನ ನಕಲಿ ಸಹಿ ಬಳಸಿ ತಹಶೀಲ್ದಾರ್ ವರ್ಗಾವಣೆಗೆ ಪತ್ರ ಬರೆಯಲಾಗಿದೆ: ಶಾಸಕ ಟಿ.ಡಿ.ರಾಜೇಗೌಡ

ಟಿ.ಡಿ.ರಾಜೇಗೌಡ
ಚಿಕ್ಕಮಗಳೂರು, ಡಿ.20: ತಮ್ಮ ನಕಲಿ ಸಹಿ ಬಳಸಿಕೊಂಡು ಶೃಂಗೇರಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡುವಂತೆ ಕಿಡಿಗೇಡಿಗಳು ಕಂದಾಯ ಸಚಿವ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದು, ಈ ಸಂಬಂಧ ಸಮಗ್ರ ತನಿಖೆಗೆ ಆಗ್ರಹಿಸಿ ಕೊಪ್ಪ ಡಿವೈಎಸ್ಪಿಗೆ ಸೂಚಿಸಿರುವುದಾಗಿ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.
ಇತ್ತೀಚೆಗೆ ಶೃಂಗೇರಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡುವಂತೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಸರಕಾರಕ್ಕೆ ಪತ್ರ ಬರೆದಿದ್ದು, ಇದರಿಂದ ಹಕ್ಕುಪತ್ರ ಹಂಚಿಕೆಗೆ ತೊಂದರೆಯಾಗಿದೆ ಎಂದು ಕೆಲವರು ದುರುದ್ದೇಶದಿಂದ ನಾನು ಬರೆದಿರುವುದಾಗಿ ಹೇಳುತ್ತಿರುವ ಪತ್ರವನ್ನು ವೈರಲ್ ಮಾಡಿದ್ದಾರೆ. ಆದರೆ ತಹಶೀಲ್ದಾರ್ ವರ್ಗಾವಣೆ ಮಾಡಬೇಕೆಂದು ಕಂದಾಯ, ಗೃಹ ಸಚಿವರಿಗೆ ಪತ್ರ ಬರೆದಿರುವುದು ಸುಳ್ಳು. ನನ್ನ ನಕಲಿ ಸಹಿ ಬಳಸಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಈ ಸಂಬಂದ ಸಮಗ್ರ ತನಿಖೆ ನಡೆಸುವಂತೆ ಕೊಪ್ಪ ಡಿವೈಎಸ್ಪಿಗೆ ಸೂಚಿಸಿದ್ದೇನೆಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಅತಿವೃಷ್ಟಿ ಪರಿಹಾರ ಹಂಚಿಕೆ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ನಾನು ತಹಶೀಲ್ದಾರ್ ಅವರ ವರ್ಗಾವಣೆಗೆ ಪತ್ರ ಬರೆದಿದ್ದು ನಿಜ. ಆದರೆ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಅಂದೇ ವರ್ಗಾವಣೆಯನ್ನು ತಡೆ ಹಿಡಿಯಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದೆ ಎಂದು ತಿಳಿಸಿರುವ ಅವರು, ಸದ್ಯ ಹಕ್ಕುಪತ್ರಗಳ ಹಂಚಿಕೆ ನಡೆಯುತ್ತಿದ್ದು, ಈ ಹಂತದಲ್ಲಿ ತಹಶೀಲ್ದಾರ್ ಅವರ ವರ್ಗಾವಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲದೇ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ತಹಶೀಲ್ದಾರ್ ವರ್ಗಾವಣೆಯಿಂದ ಜನರಿಗೆ ಭಾರೀ ಸಮಸ್ಯೆ ಆಗುತ್ತದೆ. ಆದ್ದರಿಂದ ತಹಶೀಲ್ದಾರ್ ಅವರ ವರ್ಗಾವಣೆಯನ್ನು ತಡೆ ಹಿಡಿಯಬೇಕೆಂದು ಅವರು ತಿಳಿಸಿದ್ದಾರೆ.
ಕೆಲವರು ಅನಗತ್ಯ ಗೊಂದಲ ಸೃಷ್ಟಿಸುವ ಉದ್ದೇಶದಿಂದ ನನ್ನ ನಕಲಿ ಸಹಿ ಬಳಸಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.







