ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ: 38 ಜನರ ಬಂಧನ; ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ,ಡಿ.20: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಭಗ್ನಗೊಳಿಸಿ ಹಾಗೂ ಸರಕಾರಿ ವಾಹನಗಳನ್ನು ಹಾನಿಗೊಳಿಸಿದ ಪ್ರಕರಣದಲ್ಲಿ 38 ಜನರನ್ನು ಬಂಧಿಸಿ ಜೈಲುಗಟ್ಟಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸೋಮವಾರ ವಿಧಾನಪರಿಷತ್‍ನಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ, ಶಿವಾಜಿ ಪ್ರತಿಮೆಗೆ ಮಸಿಬಳಿದಿರುವಿಕೆ, ಕಲ್ಲೆಸೆತ ಹಾಗೂ ಕನ್ನಡ ಧ್ವಜಕ್ಕೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಎಂಇಎಸ್‍ನಂತ ಕೆಲದುಷ್ಟ ಶಕ್ತಿಗಳು ತಮ್ಮ ತೀಟೆಗಾಗಿ ಹಾಗೂ ತಮ್ಮ ಅಸ್ತಿತ್ವವನ್ನು ತೋರ್ಪಡಿಸಿಕೊಳ್ಳಲು ಅನಗತ್ಯವಾಗಿ ಈ ರೀತಿಯ ದುಷ್ಕೃತ್ಯಗಳನ್ನು ಮಾಡುತ್ತಿವೆ. ಪ್ರಚೋದನೆ ನೀಡಿ ತಮ್ಮ ಬೆಳೆ ಬೇಯಿಸಿಕೊಳ್ಳಲು ಯತ್ನಿಸುವ ಎಂಇಎಸ್ ಪುಂಡರಿಗೆ ಇತ್ತೀಚೆಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮರಾಠ ಜನರೇ ಮಂಗಾಳರತಿ ಮಾಡಿದ್ದಾರೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಕನ್ನಡಿಗರು-ಮರಾಠರು ಅತ್ಯಂತ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇವರ ಪ್ರಚೋದನೆಯ ನಾಟಕ ಜನರ ಹತ್ತಿರ ನಡೆಯದು. ಈ ಮುಂಚೆ ಇವರು ನಡೆಸುತ್ತಿದ್ದ ಮಹಾಮೇಳಾವ್‍ಗೆ ಮಹಾರಾಷ್ಟ್ರದಿಂದ ಸಚಿವರು ಬಂದು ಪ್ರಚೋದನೆ ಮಾಡುತ್ತಿದ್ದರು. ಈ ರೀತಿ ಬರುವವರನ್ನು ರಾಜ್ಯದ ಗಡಿಯಲ್ಲಿಯೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಅವರನ್ನು ಜಾತಿ,ಭಾಷೆ ಮತ್ತು ಪ್ರಾಂತ್ಯದ ಚೌಕಟ್ಟಿನಡಿ ನೋಡುವುದಕ್ಕಾಗುವುದಿಲ್ಲ. ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರಾಃತಸ್ಮರಣೀಯರು;ಇಂತಹ ಮಹನೀಯರ ಪ್ರತಿಮೆಗೆ ಭಗ್ನಗೊಳಿಸುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ.ಅಂತಹ ಪುಂಡರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಈ ರೀತಿಯ ಕ್ರಮಕೈಗೊಳ್ಳುವ ಸಂದರ್ಭದಲ್ಲಿ ಅಮಾಯಕರನ್ನು ಹಿಡಿದು ಹಿಂಸಿಸಬೇಡಿ ಮತ್ತು ದುಷ್ಕøತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸದನದಲ್ಲಿ ನಡೆದ ಚರ್ಚೆಯಲ್ಲಿ ಅನೇಕ ಸದಸ್ಯರು ಪಾಲ್ಗೊಂಡು ಈ ಘಟನೆಯನ್ನು ಖಂಡಿಸಿದರು.ಈ ಘಟನೆಗೆ ಕಾರಣರಾದ ಪುಂಡರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷ ನಿಯಮಗಳಡಿ ಜೈಲುಗಟ್ಟಬೇಕು ಮತ್ತು ಈ ರೀತಿಯ ಘಟನೆಗಳಾಗದಂತೆ ಎಚ್ಚರವಹಿಸಬೇಕು. ಪ್ರತಿಮೆಗಳನ್ನು ಸಂರಕ್ಷಿಸಲು ಕಾಯ್ದೆಗಳಿದ್ದರೇ ಪರಿಷ್ಕರಿಸಿ ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.







