ಸಾಂಕ್ರಾಮಿಕದಂತಹ ಸ್ಥಿತಿ ಎದುರಿಸಲು ಜಾಗತಿಕ ಸಹಕಾರಕ್ಕೆ ಜ.ನರವಣೆ ಕರೆ

ಜ.ನರವಣೆ (photo:PTI)
ಪುಣೆ,ಡಿ.20: ಕೋವಿಡ್ ಸಾಂಕ್ರಾಮಿಕವು ಪ್ರತಿಯೊಬ್ಬರಿಗೂ ಹಲವಾರು ಪಾಠಗಳನ್ನು ಕಲಿಸಿದೆ ಎಂದು ಸೋಮವಾರ ಇಲ್ಲಿ ಹೇಳಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು, ಸಾಂಕ್ರಾಮಿಕದಂತಹ ಯಾವುದೇ ಸ್ಥಿತಿಯನ್ನು ಎದುರಿಸುವಾಗ ಜಾಗತಿಕ ಮತ್ತು ಪ್ರಾದೇಶಿಕ ಸಹಕಾರದ ಮಹತ್ವಕ್ಕೆ ಒತ್ತು ನೀಡಿದರು.
ಬಿಮ್ಸ್ಟೆಕ್ (ಬಹುಕ್ಷೇತ್ರಿಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ) ರಾಷ್ಟ್ರಗಳಿಗಾಗಿ ವಿಪತ್ತು ನಿರ್ವಹಣಾ ಅಂಶಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವ ಕೇಂದ್ರೀಕೃತ ಗುರಿಯೊಂದಿಗೆ ಪುಣೆಯಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಕಾರ್ಯಕ್ರಮ ‘ಪ್ಯಾನೆಕ್ಸ್-21’ನ್ನು ಉದ್ಘಾಟಿಸಿ ಮಾತನಾಡಿದ ಜ.ನರವಣೆ, ‘ವಿಶ್ವಾದ್ಯಂತ ಹಾವಳಿಯೆಬ್ಬಿಸಿದ್ದ ಕೋವಿಡ್ ಸಾಂಕ್ರಾಮಿಕವು ಮುನ್ನೆಚ್ಚರಿಕೆ ಕ್ರಮಗಳು,ಶಮನ ಕಾರ್ಯತಂತ್ರ ಮತ್ತು ಶಿಷ್ಟಾಚಾರಗಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ಹಲವಾರು ಪಾಠಗಳನ್ನು ಕಲಿಸಿದೆ.
ಕೋವಿಡ್ ಪಿಡುಗು ಈಗಲೂ ಹಲವಾರು ದೇಶಗಳಲ್ಲಿ ಅಬ್ಬರ ಮೆರೆಯುತ್ತಿದೆ. 2021 ಎಪ್ರಿಲ್-ಮೇ ಅವಧಿಯಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ಸಾಂಕ್ರಾಮಿಕದ ಅತ್ಯಂತ ಕೆಟ್ಟ ಪರಿಣಾಮಗಳಿಗೆ ಭಾರತವು ಈಗಾಗಲೇ ಸಾಕ್ಷಿಯಾಗಿದೆ,ಆ ಸಂದರ್ಭದಲ್ಲಿ ಹಲವಾರು ಅಮೂಲ್ಯ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. ಕೋವಿಡ್ ಸಾಂಕ್ರಾಮಿಕವು ನಿಜಕ್ಕೂ ಸವಾಲುಗಳನ್ನು ಎದುರಿಸಲು ಮತ್ತು ಶೀಘ್ರ ರೋಗದ ತೀವ್ರತೆಯನ್ನು ಶಮನಿಸಲು ವಿಶ್ವ ಸಮುದಾಯವನ್ನು ಒಂದುಗೂಡಿಸಿದೆ ’ಎಂದರು.
ಈ ವಿಷಯದಲ್ಲಿ ತ್ವರಿತವಾಗಿ ಜನರಿಗೆ ರಕ್ಷಣೆ ನೀಡಲು ವಿವಿಧ ಲಸಿಕೆಗಳ ಅಭಿವೃದ್ಧಿ ಮತ್ತು ಲಸಿಕೆ ಅಭಿಯಾನ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಸಾಂಕ್ರಾಮಿಕ ಸ್ಥಿತಿಯು ಶಮನಗೊಳ್ಳುವವರೆಗೆ ನೈಸರ್ಗಿಕ ಪ್ರಕೋಪವು ಕಾಯುವುದಿಲ್ಲ ಎನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತಿದೆ ಎಂದ ಅವರು, ಅಲ್ಲದೆ ಅವಳಿ ವಿಪತ್ತು ಈಗಿನ ವಾಸ್ತವವಾಗಿದ್ದು, ನಮ್ಮ ಜನರ ಮೇಲೆ ಅದರ ಪರಿಣಾಮಗಳನ್ನು ಶಮನಿಸಲು ನಾವು ಸಿದ್ಧರಿರಬೇಕು. ಆದ್ದರಿಂದ ಈ ಬಗ್ಗೆ ಪ್ರಾದೇಶಿಕ ಸಹಕಾರವನ್ನು ಪಡೆಯಲು ದೇಶಗಳ ನಡುವೆ ಸಹಕಾರದ ಪ್ರಾಮುಖ್ಯತೆಯು ಅನಿವಾರ್ಯವಾಗಿದೆ. ಬಿಮ್ಸ್ಟೆಕ್ ಹಲವಾರು ಸಮಾನತೆಗಳನ್ನು ಹಂಚಿಕೊಂಡಿರುವ ಹಾಗೂ ಹಲವಾರು ವರ್ಷಗಳಿಂದ ಸಾಂಸ್ಕೃತಿಕವಾಗಿ,ಆರ್ಥಿಕವಾಗಿ ತೊಡಗಿಸಿಕೊಂಡಿರುವ ಸದಸ್ಯ ರಾಷ್ಟ್ರಗಳ ಇಂತಹ ಗುಂಪಾಗಿದೆ ಎಂದರು.
ಬಿಮ್ಸ್ಟೆಕ್ ಪ್ರಾದೇಶಿಕ ಸಂಘಟನೆಯು ಭಾರತ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಗಳನ್ನು ಒಳಗೊಂಡಿದೆ.







