ಗುಜರಾತ್: 400 ಕೋ.ರೂ. ಮೌಲ್ಯದ ಹೆರಾಯಿನ್ ಇದ್ದ ಪಾಕಿಸ್ತಾನದ ದೋಣಿ ವಶ

File Photo | PTI
ಹೊಸದಿಲ್ಲಿ, ಡಿ. 19: ಆರು ಮಂದಿ ಸಿಬ್ಬಂದಿ ಹಾಗೂ ಸುಮಾರು 400 ಕೋಟಿ ರೂಪಾಯಿ ಮೌಲ್ಯದ 77 ಕಿ.ಗ್ರಾಂ. ಹೆರಾಯಿನ್ ಇದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ನ ಕರಾವಳಿಯಿಂದ ವಶಕ್ಕೆ ಪಡೆಯಲಾಗಿದೆ. ಗುಜರಾತ್ ನ ಕಚ್ಛ್ ಜಿಲ್ಲೆಯ ಜಾಖೌ ಕರಾವಳಿಯಿಂದ ಸುಮಾರು 35 ನಾವಿಕ ಮೈಲು ದೂರದಲ್ಲಿ ಭಾರತೀಯ ತಟ ರಕ್ಷಣಾ ಪಡೆ ಹಾಗೂ ಗುಜರಾತ್ ಭಯೋತ್ಪಾದಕ ವಿರೋಧಿ ದಳ (ಎಟಿಎಸ್) ರವಿವಾರ ಮಧ್ಯರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಈ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 ಸಿಬ್ಬಂದಿಯಿದ್ದ ಪಾಕಿಸ್ತಾನದ ಮೀನುಗಾರಿಕೆ ದೋಣಿಯನ್ನು ಭಾರತದ ಜಲ ಭಾಗದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಸಮಾರು 400 ಕೋಟಿ ರೂಪಾಯಿ ಮೌಲ್ಯದ 77 ಕಿ.ಗ್ರಾಂ. ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ರಕ್ಷಣಾ ಪಿಆರ್ಒ ಇಂದು ಬೆಳಗ್ಗೆ ಟ್ವೀಟ್ ಮಾಡಿದೆ. ಈ ದೋಣಿಯನ್ನು ಅನಂತರ ಹೆಚ್ಚಿನ ತನಿಖೆಗಾಗಿ ಜಾಖೌ ಕರಾವಳಿಗೆ ತರಲಾಯಿತು. ಕರಾಚಿ ಬಂದರಿನಿಂದ ನಿರ್ಗಮಿಸಿದ ಪಾಕಿಸ್ತಾನದ ದೋಣಿ ಅತ್ಯಧಿಕ ಆವರ್ತನ ರೇಡಿಯೊ ಚಾನೆಲ್ ಹಾಗೂ ಸಂಕೇತ ಪದ ‘ಹರಿ-1’ ಹಾಗೂ ‘ಹರಿ-2’ ಬಳಸಿ ಮಾದಕ ಪದಾರ್ಥವನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಸಂಪರ್ಕ ಸಾಧಿಸಲು ಪ್ರಯತ್ನಿಸಿತು ಎಂದು ಗುಜರಾತ್ ಎಟಿಎಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.