ತುಷ್ಟೀಕರಣ ರಾಜಕೀಯ: ಅವಳಿ ಕೊಲೆಗಳ ಕುರಿತು ಸರಕಾರಕ್ಕೆ ಕೇಂದ್ರ ಸಚಿವ ನಿತ್ಯಾನಂದ ರಾಯ್ ತರಾಟೆ

Nityanand Rai(photo:twitter/@nityanandoffice)
ಅಲಪ್ಪುಳ,ಡಿ.20: ಬಿಜೆಪಿ ಒಬಿಸಿ ಮೋರ್ಚಾದ ನಾಯಕ ರಂಜಿತ್ ಶ್ರೀನಿವಾಸನ್ ಅವರ ಹತ್ಯೆ ಕುರಿತು ನ್ಯಾಯಸಮ್ಮತ ತನಿಖೆಯನ್ನು ಖಚಿತಪಡಿಸುವಂತೆ ಸೋಮವಾರ ಕೇರಳ ಸರಕಾರಕ್ಕೆ ಸೂಚಿಸಿದ ಕೇಂದ್ರ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು,ಅದರ ತುಷ್ಟೀಕರಣ ರಾಜಕೀಯವು ಮೂಲಭೂತವಾದಿ ಶಕ್ತಿಗಳಿಗೆ ನೆರವಾಗುತ್ತಿದೆ ಎಂದು ಹೇಳಿದರು. ರವಿವಾರ ಕೊಲೆಯಾದ ಶ್ರೀನಿವಾಸನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಯ್ ಸೋಮವಾರ ಅಲಪ್ಪುಳ ಜಿಲ್ಲೆಗೆ ಭೇಟಿ ನೀಡಿದ್ದರು.
ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಅವರನ್ನು ಶನಿವಾರ ರಾತ್ರಿ ಶಂಕಿತ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ಹತ್ಯೆ ಮಾಡಿದ್ದು,ಇದಕ್ಕೆ ಪ್ರತೀಕಾರವಾಗಿ ರವಿವಾರ ಶಂಕಿತ ಎಸ್ಡಿಪಿಐ ಕಾರ್ಯಕರ್ತರು ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಈಗ ನಡೆಯುತ್ತಿರುವ ತನಿಖೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ನ್ಯಾಯಯುತ ತನಿಖೆ ನಡೆಯಬೇಕು ಮತ್ತು ಎಲ್ಲ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ನಾವು ಬಯಸಿದ್ದೇವೆ. ರಾಜ್ಯ ಸರಕಾರವು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ ಮತ್ತು ಇದು ನಿಜಕ್ಕೂ ಮೂಲಭೂತವಾದಿಗಳು ಮತ್ತು ಕ್ರಿಮಿನಲ್ ಶಕ್ತಿಗಳಿಗೆ ನೆರವಾಗಿದೆ ’ಎಂದು ಶ್ರೀನಿವಾಸನ್ ಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ 200ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲಾಗಿದೆ ಎಂದರು.
ಎಡರಂಗ ಸರಕಾರವು ಬಿಜೆಪಿಯ ಜನಪ್ರಿಯತೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ ಮತ್ತು ಇತ್ತೀಚಿಗೆ ಪಕ್ಷದ ಇಬ್ಬರು ನಾಯಕರ ಹತ್ಯೆಗಳಲ್ಲಿ ಭಾಗಿಯಾಗಿದ್ದವರ ರಕ್ಷಣೆ ಸೇರಿದಂತೆ ಎಲ್ಲ ತಂತ್ರಗಳನ್ನು ಬಳಸುತ್ತಿದೆ ಎಂದರು. ಇನ್ನೋರ್ವ ಆರೆಸ್ಸೆಸ್-ಬಿಜೆಪಿ ನಾಯಕ ಎಸ್.ಸಂಜಿತ್ ರನ್ನು ಎರಡು ವಾರಗಳ ಹಿಂದೆ ಪಾಲಕ್ಕಾಡ್ನಲ್ಲಿ ಎಸ್ಡಿಪಿಐ ಕಾರ್ಯಕರ್ತರು ಎನ್ನಲಾದ ಗುಂಪೊಂದು ಇರಿದು ಹತ್ಯೆ ಮಾಡಿತ್ತು.
ರಾಜ್ಯವು ಒಪ್ಪಿದರೆ ಇತ್ತೀಚಿನ ಹತ್ಯೆಗಳ ಬಗ್ಗೆ ಕೇಂದ್ರೀಯ ಏಜೆನ್ಸಿಯಿಂದ ತನಿಖೆ ನಡೆಸಲು ಕೇಂದ್ರ ಸರಕಾರವು ಸಿದ್ಧವಿದೆ ಎಂದು ರಾಯ್ ತಿಳಿಸಿದರು. ಎಸ್ಡಿಪಿಐ ನಾಯಕ ಶಾನ್ ಹತ್ಯೆ ಕುರಿತು ಕೇಳಿದಾಗ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
12 ಗಂಟೆಗಳ ಅವಧಿಯಲ್ಲಿ ಬೆನ್ನುಬೆನ್ನಿಗೆ ನಡೆದಿರುವ ರಾಜಕಿಯ ಹತ್ಯೆಗಳು ಕೇರಳ ಪೊಲಿಸರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ. ಅಲಪ್ಪುಳ ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು,ಇನ್ನಷ್ಟು ಘರ್ಷಣೆಗಳನ್ನು ತಪ್ಪಿಸಲು ಪೊಲೀಸರು ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಿದ್ದಾರೆ.
ಎಸ್ಡಿಪಿಐ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಬಿಜೆಪಿ ನಾಯಕನ ಹತ್ಯೆಯಲ್ಲಿ ಭಾಗಿಯಾಗಿದ್ದ ಎಲ್ಲರನ್ನು ಗುರುತಿಸಲಾಗಿದೆ. ಎರಡು ದಿನಗಳಲ್ಲಿ ಎರಡೂ ಪ್ರಕರಣಗಳನ್ನು ಭೇದಿಸಲಾಗುವುದು ಎಂದು ವಿಶೇಷ ತನಿಖಾ ತಂಡದ ಉಸ್ತುವಾರಿ ವಹಿಸಿರುವ ಎಡಿಜಿಪಿ ವಿಜಯ ಸಾಖ್ರೆ ತಿಳಿಸಿದರು.
ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ 50ಕ್ಕೂ ಅಧಿಕ ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು. ವೃತ್ತಿಯಲ್ಲಿ ಉದ್ಯಮಿಯಾಗಿದ್ದ ಶಾನ್ ಅಂತ್ಯಸಂಸ್ಕಾರ ರವಿವಾರ ನಡೆದಿದೆ. ವಕೀಲರಾಗಿದ್ದ ಶ್ರೀನಿವಾಸನ್ ಅಂತ್ಯಸಂಸ್ಕಾರವನ್ನು ಸೋಮವಾರ ನೆರವೇರಿಸಲಾಗಿದೆ.







