ಪುರಸಭಾ ಚುನಾವಣೆ; ಸ್ವಚ್ಛ ಸುಂದರ ಕಾಪು ನಿರ್ಮಾಣ ಕಾಂಗ್ರೆಸ್‍ನ ಕನಸು: ವಿನಯಕುಮಾರ್ ಸೊರಕೆ

ಕಾಪು : ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದಲ್ಲಿ ಸ್ವಚ್ಛ ಮತ್ತು ಸುಂದರವಾದ ಮಾದರಿ ಕಾಪು ನಿರ್ಮಾಣ ಮಾಡುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದು ಕಾಂಗ್ರೆಸ್ ನಾಯಕ ವಿನಯಕುಮಾರ್ ಸೊರಕೆ ಹೇಳಿದರು.
ಕಾಪು ಪುರಸಭಾ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಕಾಪು ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ನಡೆಸುವ ಸಂದರ್ಭದಲ್ಲಿ ಮಾತನಾಡಿದರು.
ನನ್ನ ಶಾಸಕತ್ವದ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸುವಾಗ ಬಿಜೆಪಿ ಒಂದಿಲ್ಲೊಂದು ಕಾರಣಗಳನ್ನು ಮುಂದಿಟ್ಟುಕೊಂಡು ಅಡೆತಡೆ ಮಾಡುತ್ತಿತ್ತು. ಆದರೂ ನಿರಂತರವಾಗಿ ಅಭಿವೃದ್ದಿ ಕಾರ್ಯಕ್ರಮಗಳನ್ನು ನಡೆಸಿದ್ದು, ಇದರಿಂದಾಗಿ ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಪುರಸಭೆಯು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ ಈಗ ಬಿಜೆಪಿ ಶಾಸಕರ ಆಡಳಿತದ ವೇಳೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು ಮತ್ತೆ ಜನಪರ ಮತ್ತು ಅಭಿವೃದ್ಧಿ ಪರ ಕಾರ್ಯಕ್ರಮಗಳಿಗಾಗಿ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಅಗತ್ಯತೆಯಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿದಲ್ಲಿದ್ದು, ಪುರಸಭೆಯಲ್ಲೂ ತಮ್ಮದೇ ಆಡಳಿತಕ್ಕೆ ಬಂದಲ್ಲಿ ಸುಸ್ಥಿರ, ಜನಪರ ಮತ್ತು ಅಭಿವೃದ್ಧಿ ಪರ ಅಧಿಕಾರ ನಡೆಸುತ್ತೇವೆ ಎನ್ನುವ ಬಿಜೆಪಿಯವರು ಜನ ಸಾಮಾನ್ಯರ ಪ್ರಶ್ನೆಗಳಿಗೆ ಉತ್ತರಿಸಲು ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿ ಶಾಸಕ, ಸಚಿವರು ಮತ್ತು ಮುಖಂಡರು ಮನೆ ಮನೆಗೆ ಮತಯಾಚನೆಗೆ ಬಂದಾಗ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರು ಅವರನ್ನು ನಿಲ್ಲಿಸಿ ದಿನಬಳಕೆಯ ವಸ್ತುಗಳು, ಗ್ಯಾಸ್, ವಿದ್ಯುತ್, ಮನೆ ತೆರಿಗೆ ಸಹಿತವಾಗಿ ವಿವಿಧ ರೀತಿಯ ಬೆಲೆಯೇರಿಕೆ ಬಗ್ಗೆ ಪ್ರಶ್ನಿಸುವ ಕಾಲ ಕೂಡಿಬಂದಿದೆ ಎಂದರು.
ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ. ಎ. ಗಫೂರ್, ಅಮೃತ್ ಶೆಣೈ, ಎಂ.ಪಿ. ಮೊಯಿನಬ್ಬ, ವಿಘ್ನೇಶ್ ಕಿಣಿ ಕಾರ್ಕಳ, ಶರ್ಫುದ್ದೀನ್ ಶೇಖ್, ಎಚ್. ಅಬ್ದುಲ್ಲ, ಅಮೀರ್ ಕಾಪು, ಹರೀಶ್ ನಾಯಕ್, ಆಶಾ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.







