2014-21ರ ವರೆಗೆ ಐಐಟಿ, ಐಐಎಂ, ಕೇಂದ್ರೀಯ ವಿ.ವಿ.ಯಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ

ಹೊಸದಿಲ್ಲಿ, ಡಿ. 19: ಐಐಟಿ, ಐಐಎಂ, ಕೇಂದ್ರೀಯ ವಿ.ವಿ. ಹಾಗೂ ಕೇಂದ್ರ ಸರಕಾರ ಹಣಕಾಸು ನೆರವು ಒದಗಿಸುವ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2014-21ರ ವರೆಗೆ ಒಟ್ಟು 122 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸೋಮವಾರ ಲೋಕಸಭೆಗೆ ತಿಳಿಸಲಾಯಿತು.
ಲೋಕಸಭೆಯಲ್ಲಿ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಈ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 122 ವಿದ್ಯಾರ್ಥಿಗಳು ಆತ್ಮಹತ್ಯೆಗೈದಿದ್ದಾರೆ. ಅವರಲ್ಲಿ 24 ಪರಿಶಿಷ್ಟ ಜಾತಿ, 41 ಇತರ ಹಿಂದುಳಿದ ವರ್ಗ, 3 ಪರಿಶಿಷ್ಟ ಪಂಗಡ ಹಾಗೂ 3 ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಎಂದರು.
ಸಚಿವರು ಹಂಚಿಕೊಂಡ ದತ್ತಾಂಶದ ಪ್ರಕಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ (ಐಐಎಸ್‌ಸಿ), ಕೇಂದ್ರೀಯ ವಿಶ್ವವಿದ್ಯಾನಿಲಯ ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಅವಧಿಯಲ್ಲಿ 121 ಆತ್ಮಹತ್ಯೆ ಘಟನೆಗಳು ಸಂಭವಿಸಿವೆ.
ಈ ಅವಧಿಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳ ಸಂಖ್ಯೆ ವಿವಿಧ ಐಐಟಿಗಳಲ್ಲಿ 34 ಹಾಗೂ ವಿವಿಧ ಐಐಎಂಗಳ 4 ಐಐಎಸ್‌ಸಿ ಬೆಂಗಳೂರು ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಐಐಎಸ್ಇಆರ್)ನ 9 ವಿದ್ಯಾರ್ಥಿಗಳು 2014-21ರ ನಡುವೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೇ ಅವಧಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿ (ಐಐಐಟಿ )ಯ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಅತ್ಯಧಿಕ 37 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಂತರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿಎಸ್)ಯಲ್ಲಿ 30 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕಿರುಕುಳ, ಅಸಮಾನತೆಯ ಘಟನೆಗಳನ್ನು ಪರಿಶೀಲಿಸಲು ಸರಕಾರ ಹಾಗೂ ವಿಶ್ವವಿದ್ಯಾನಿಲಯ ಅನುದಾನ ಆಯೋಗ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನ್ ತಿಳಿಸಿದ್ದಾರೆ.







