12 ದಿನದ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಮರಳಿದ ಜಪಾನ್ ನ ಯುಸಕು ಮೆಜಾವ

photo;twitter/@yousuck2020
ಟೋಕಿಯೊ, ಡಿ.20: ಜಪಾನ್ನ ಬಿಲಿಯನೇರ್ ಯುಸಕು ಮೆಜಾವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನ ಕಳೆದ ಬಳಿಕ ಸೋಮವಾರ ಭೂಮಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.
ಎಲಾನ್ ಮಸ್ಕ್ ಅವರೊಂದಿಗೆ ಬಾಹ್ಯಾಕಾಶ ನೌಕೆಯಲ್ಲಿ 2023ರಲ್ಲಿ ಚಂದ್ರಯಾನ ಮಾಡುವ ಯೋಜನೆ ಹೊಂದಿರುವ ಮೆಜಾವ, ಇದಕ್ಕೆ ಪೂರ್ವಸಿದ್ಧತೆಯಾಗಿ 12 ದಿನದ ಬಾಹ್ಯಾಕಾಶ ಯಾನ ಕೈಗೊಂಡಿದ್ದಾರೆ. ಅವರ ಸಹಾಯಕ ಯೋಜೊ ಹಿರಾನೊ, ರಶ್ಯಾದ ಗಗನಯಾನಿ ಅಲೆಕ್ಸಾಂಡರ್ ಮಿಸುರ್ಕಿನ್ ಈ ಯಾತ್ರೆಯಲ್ಲಿ ಜತೆಗಿದ್ದರು.
ಪ್ರವಾಸಿಗ ಬಾಹ್ಯಾಕಾಶ ನೌಕೆ ಸೋಯುರ್ ಎಂಎಸ್-20ರ ಯಾನ ಮುಕ್ತಾಯಗೊಂಡಿದೆ ಎಂದು ರಶ್ಯಾದ ಬಾಹ್ಯಾಕಾಶ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ಹೇಳಿದೆ. ಡಿಸೆಂಬರ್ 8ರಂದು ಕಝಕ್ಸ್ತಾನ್ನ ಬಾಹ್ಯಾಕಾಶ ಕೇಂದ್ರದಿಂದ ಅಂತರಿಕ್ಷದೆಡೆ ಪ್ರಯಾಣ ಆರಂಭಿಸಿದ ಜಪಾನ್ನ ಗಗನಯಾತ್ರಿಗಳು, ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸ ತೆರಳಿದ ಪ್ರಪ್ರಥಮ ಗಗನಯಾನಿಗಳೆಂಬ ದಾಖಲೆ ಬರೆದಿದ್ದಾರೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ 7 ಸದಸ್ಯರ ತಂಡವು ಈ ಪ್ರವಾಸೀ ಗಗನಯಾನಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿತು . ಮೆಜಾವ ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಹಲ್ಲುಜ್ಜುವ ಬಗೆ, ಚಹಾ ತಯಾರಿಸುವ ಬಗೆಯನ್ನು ವಿವರಿಸುವ ಫೋಟೋವನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಅಪ್ಲೋಡ್ ಮಾಡುತ್ತಿದ್ದರು ಎಂದು ವರದಿಯಾಗಿದೆ.





