ವರವರ ರಾವ್ ಜಾಮೀನು ಅವಧಿ ಜ. 7ರ ವರೆಗೆ ವಿಸ್ತರಣೆ

ಮುಂಬೈ, ಡಿ. 19: ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ಕವಿ ಹಾಗೂ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರಿಗೆ ತಲೋಜ ಕಾರಾಗೃಹದ ಅಧಿಕಾರಿಗಳ ಮುಂದೆ ಶರಣಾಗಲು ನಿರ್ದೇಶಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದೆ.
ಕಾರಾಗೃಹದಲ್ಲಿ ಇರುವ ಇತರ ಕೆಲವು ವೃದ್ಧ ಕೈದಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯತೆ ಇದೆ ಎಂದು ಅದು ಹೇಳಿದೆ. ವರವರ ರಾವ್ ಅವರು ಶರಣಾಗತರಾಗುವ ದಿನಾಂಕವನ್ನು ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಹಾಗೂ ಎಸ್.ವಿ. ಕೊತ್ವಾಲ್ ಅವರನ್ನು ಒಳಗೊಂಡ ಪೀಠ 2022 ಜನವರಿ 7ರ ವರೆಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಎನ್ಐಎ ಈ ಪ್ರತಿಪಾದನೆ ಮಾಡಿತು.
ಈ ವರ್ಷ ಆರಂಭದಲ್ಲಿ ಉಚ್ಚ ನ್ಯಾಯಾಲಯ ವರವರ ರಾವ್ ಅವರಿಗೆ ತಾತ್ಕಾಲಿಕ 6 ತಿಂಗಳ ವೈದ್ಯಕೀಯ ಜಾಮೀನು ನೀಡಿತ್ತು. ಅವರು ಸೆಪ್ಟಂಬರ್ 5ರಂದು ಶರಣಾಗತರಾಗಬೇಕಿತ್ತು. ಆದರೆ, ಅವರು ಹಲವು ಅಸೌಖ್ಯದಿಂದ ಬಳಲುತ್ತಿರುವುದರಿಂದ ಜಾಮೀನು ವಿಸ್ತರಿಸುವಂತೆ ಕೋರಿ ಮನವಿ ಸಲ್ಲಿಸಿದ್ದರು.
Next Story





