ಆಂಗ್ ಸಾನ್ ಸೂಕಿ ವಿಚಾರಣೆಯ ತೀರ್ಪು ಮುಂದೂಡಿಕೆ

ಯಾಂಗಾನ್, ಡಿ.20: ಮ್ಯಾನ್ಮಾರ್ ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರ ವಿಚಾರಣೆಯ ತೀರ್ಪನ್ನು ನ್ಯಾಯಾಲಯ ಮುಂದೂಡಿದೆ ಎಂದು ಮೂಲಗಳು ಹೇಳಿವೆ.
ಆಂಗ್ಸಾನ್ ಸೂಕಿ ವಿರುದ್ಧ ಲೈಸೆನ್ಸ್ ಪಡೆಯದೆ ವಾಕಿಟಾಕಿ ಮತ್ತು ಮೊಬೈಲ್ ಸಿಗ್ನಲ್ ಜಾಮರ್ ಹೊಂದಿದ್ದ ಮೊಕದ್ದಮೆಯ ವಿಚಾರಣೆ ಪೂರ್ಣಗೊಂಡಿದ್ದು ಸೋಮವಾರ ತೀರ್ಪು ಪ್ರಕಟಿಸುವ ನಿರೀಕ್ಷೆಯಿತ್ತು. ಈ ಪ್ರಕರಣದಲ್ಲಿ ಕ್ರಮವಾಗಿ 3 ಮತ್ತು 1 ವರ್ಷದ ಜೈಲುಶಿಕ್ಷೆ ವಿಧಿಸಬಹುದು. 6 ವಾಕಿಟಾಕಿಗಳನ್ನು ಅಕ್ರಮವಾಗಿ ವಿದೇಶದಿಂದ ಆಮದು ಮಾಡಿಕೊಂಡು ಅನುಮತಿ ಪಡೆಯದೆ ಬಳಸಿದ ಪ್ರಕರಣ ಇದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣವನ್ನು ಡಿಸೆಂಬರ್ 27ಕ್ಕೆ ಮುಂದೂಡಲಾಗಿದೆ. ತೀರ್ಪು ಮುಂದೂಡಿಕೆಗೆ ಯಾವುದೇ ಕಾರಣವನ್ನು ನ್ಯಾಯಾಧೀಶರು ನೀಡಿಲ್ಲ ಎಂದು ಮೂಲಗಳು ಹೇಳಿವೆ. ಕೊರೋನ ವೈರಸ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಸೂಕಿಗೆ ಡಿಸೆಂಬರ್ 6ರಂದು 4 ವರ್ಷದ ಜೈಲುಶಿಕ್ಷೆ ವಿಧಿಸಲಾಗಿತ್ತು. ಬಳಿಕ ಶಿಕ್ಷೆಯನ್ನು 2 ವರ್ಷಕ್ಕೆ ಇಳಿಸಲಾಗಿದೆ. ರಾಜಧಾನಿ ಯಾಂಗಾನ್(ನೇಪಿಡಾವ್)ನ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿದೆ. ಸೂಕಿ ವಿರುದ್ಧ ಸುಮಾರು 12ರಷ್ಟು ಪ್ರಕರಣ ದಾಖಲಾಗಿದ್ದು ಇದರಲ್ಲಿ ಒಟ್ಟು 100 ವರ್ಷಕ್ಕೂ ಅಧಿಕ ಜೈಲುಶಿಕ್ಷೆಯಾಗಬಹುದು.







