ಜಮ್ಮುಗೆ ಆರು, ಕಾಶ್ಮೀರಕ್ಕೆ ಒಂದು ಹೆಚ್ಚುವರಿ ವಿಧಾನಸಭಾ ಸ್ಥಾನಗಳು
ಪುನರ್ವಿಂಗಡಣೆ ಆಯೋಗದ ಪ್ರಸ್ತಾವಕ್ಕೆ ಸ್ಥಳೀಯ ಪಕ್ಷಗಳ ವಿರೋಧ

ಸಾಂದರ್ಭಿಕ ಚಿತ್ರ:PTI
ಶ್ರೀನಗರ,ಡಿ.20: ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಜಮ್ಮುವಿಗೆ ಆರು ಮತ್ತು ಕಾಶ್ಮೀರಕ್ಕೆ ಕೇವಲ ಒಂದು ಹೆಚ್ಚುವರಿ ವಿಧಾನಸಭಾ ಸ್ಥಾನಗಳನ್ನು ಪ್ರಸ್ತಾವಿಸಿದೆ ಎಂಬ ವರದಿಗಳ ನಡುವೆಯೇ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಜಮ್ಮು-ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ),ಪಿಡಿಪಿ ಮತ್ತು ಪೀಪಲ್ಸ್ ಕಾನ್ಫರೆನ್ಸ್ (ಪಿಸಿ) ಆಯೋಗದ ಶಿಫಾರಸುಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿವೆ.
‘ಆಯೋಗದ ಕರಡು ಶಿಫಾರಸು ಸ್ವೀಕಾರಾರ್ಹವಲ್ಲ. ಜಮ್ಮುವಿಗೆ ಆರು ಮತ್ತು ಕಾಶ್ಮೀರಕ್ಕೆ ಕೇವಲ ಒಂದು ನೂತನ ವಿಧಾನಸಭಾ ಸ್ಥಾನಗಳ ಸೃಷ್ಟಿಯನ್ನು 2011ರ ಜನಗಣತಿ ದತ್ತಾಂಶಗಳು ಸಮರ್ಥಿಸುವುದಿಲ್ಲ ’ಎಂದು ಸೋಮವಾರ ಟ್ವೀಟಿಸಿರುವ ಎನ್ಸಿ ಕಾರ್ಯಾಧ್ಯಕ್ಷ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು,ಆಯೋಗವು ಕೇವಲ ದತ್ತಾಂಶಗಳನ್ನು ಪರಿಗಣಿಸುವ ಬದಲು ತನ್ನ ಶಿಫಾರಸುಗಳನ್ನು ನಿರ್ದೇಶಿಸಲು ಬಿಜೆಪಿಯ ರಾಜಕೀಯ ಅಜೆಂಡಾಕ್ಕೆ ಅವಕಾಶ ನೀಡಿರುವಂತೆ ಕಂಡುಬರುತ್ತಿದ್ದು,ಇದು ತೀವ್ರ ನಿರಾಶಾದಾಯಕವಾಗಿದೆ. ಇದು ಭರವಸೆ ನೀಡಿದ್ದ ವೈಜ್ಞಾನಿಕ ವಿಧಾನದ ಬದಲು ರಾಜಕೀಯ ವಿಧಾನವಾಗಿದೆ ಎಂದಿದ್ದಾರೆ.
370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆಗಾಗಿ ಕಳೆದ ವರ್ಷ ರಚಿಸಲಾಗಿದ್ದ ಆಯೋಗವು ಇಂದು ದಿಲ್ಲಿಯಲ್ಲಿ ಎನ್ಸಿಯ ಮೂವರು ಮತ್ತು ಬಿಜೆಪಿಯ ಇಬ್ಬರು ಸಂಸದರು ಸೇರಿದಂತೆ ಐವರು ಸಹವರ್ತಿ ಸದಸ್ಯರನ್ನು ಭೇಟಿಯಾಗಿದ್ದು,ಜಮ್ಮುವಿಗೆ ಆರು ಮತ್ತು ಶ್ರೀನಗರಕ್ಕೆ ಕೇವಲ ಒಂದು ಹೆಚ್ಚುವರಿ ಸ್ಥಾನಗಳನ್ನು ನೀಡುವ ತನ್ನ ಪ್ರಸ್ತಾವದ ಕುರಿತು ಮಾಹಿತಿ ನೀಡಿದೆ.
ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದ ವಿಧಾನಸಭೆಯು ಕಾಶ್ಮೀರಕ್ಕೆ 46,ಜಮ್ಮುವಿಗೆ 37 ಮತ್ತು ಲಡಾಖ್ಗೆ ನಾಲ್ಕು ಸ್ಥಾನಗಳನ್ನು ಹೊಂದಿತ್ತು. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಕ್ಕೆ 24 ಸ್ಥಾನಗಳನ್ನು ಮೀಸಲಿರಿಸಲಾಗಿತ್ತು.
370ನೇ ವಿಧಿಯ ರದ್ದತಿಯ ಬಳಿಕ ವಿಧಾನಸಭಾ ಸ್ಥಾನಗಳ ಸಂಖ್ಯೆ 90ಕ್ಕೆ ಏರಿಕೆಯಾಗಲಿದೆ ಮತ್ತು ಪಿಒಕೆಗೆ 24 ಸ್ಥಾನಗಳ ಮೀಸಲಾತಿ ಮುಂದುವರಿಯಲಿದೆ.ಪುನರ್ವಿಂಗಡಣೆ ಪ್ರಕ್ರಿಯೆಯನ್ನು 2011ರ ಜನಗಣತಿಯಂತೆ ನಡೆಸಲಾಗಿದೆ. ಅದರಂತೆ ಜಮ್ಮು-ಕಾಶ್ಮೀರವು ಒಟ್ಟು 1,25,41,302 ಜನಸಂಖ್ಯೆಯನ್ನು ಹೊಂದಿದ್ದು,ಈ ಪೈಕಿ ಕಾಶ್ಮೀರದ ಪಾಲು 68,88,475 ಮತ್ತು ಜಮ್ಮು ಪ್ರದೇಶದ ಪಾಲು 53,50,811 ಆಗಿದ್ದವು.
ಆಯೋಗದ ಶಿಫಾರಸುಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಪಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಸಜ್ಜಾದ್ ಲೋನೆ ಹೇಳಿದ್ದರೆ,ಪುನರ್ವಿಂಗಡಣೆ ಆಯೋಗದ ಕುರಿತು ತನ್ನ ಭೀತಿಗಳು ನಿಜವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿದ್ದಾರೆ.